ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೇನಾಮಿ ಹೆಸರಿನಲ್ಲಿ ಖರೀದಿಸಿರುವ 67 ಎಕರೆ ರೈತರ ಜಮೀನನ್ನು ಭೂಮಿ ಕಳೆದುಕೊಂಡ ರೈತರಿಗೆ ವಾಪಸ್ ನೀಡಿ, ಒತ್ತುವರಿ ಮಾಡಿದ ಹಳ್ಳ ಬಿಟ್ಟುಕೊಡಬೇಕು ಎಂದು ಚಿಕ್ಕಬಿದರಿ, ದುಗ್ಗಾವತಿ ಹಾಗೂ ಕಡತಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮದ ಸರ್ವೇ ನಂಬರ್ 12, 13, 14 ಮತ್ತು 15ಕ್ಕೆ ಹೊಂದಿಕೊಂಡಿರುವ ಹಳ್ಳವನ್ನು ಮುಚ್ಚಿಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳುತ್ತಿದ್ದಾರೆ. ಆದರೆ, ಜೆಸಿಬಿ ಬಳಸಿ ಮುಚ್ವಿದ ಹಳ್ಳ, ತೆಗೆಸಿದ ಜಿಪಿಎಸ್ ಸಹಿತ ಫೋಟೋಗಳ ಸಾಕ್ಷಿ ನಮ್ಮ ಬಳಿ ಇದೆ ಎಂದರು.
ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮದ ಸರ್ವೇ ನಂಬರ್ 236/ಸಿರಲ್ಲಿ 67 ಎಕರೆ ರೈತರ ಜಮೀನನ್ನು ಕೆಐಎಡಿ ಮೂಲಕ ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಕೆಐಎಡಿಯಿಂದ ಬರಬೇಕಾದ ಪರಿಹಾರ ಹಣವನ್ನೂ ರೈತರ ನಕಲಿ ಸಹಿ ಮಾಡಿ ಲೂಟಿ ಮಾಡಿದ್ದಾರೆ. ಇದು ರೈತರಿಗೆ ಮಾಡಿದ ಅನ್ಯಾಯವಲ್ಲವೇ? ಎಂದು ಗ್ರಾಮಸ್ಥರು ಸಚಿವರನ್ನು ಪ್ರಶ್ನೆ ಮಾಡಿದ್ದಾರೆ
ಶಾಮನೂರು ಶುಗರ್ಸ್ನವರು ಚಿಕ್ಕಬಿದಿರಿ, ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಕಾರ್ಖಾನೆ ಮಾಡಲು ಸಾವಿರಾರು ಎಕರೆ ರೈತರ ಜಮೀನನನ್ನು ಅಕ್ರಮವಾಗಿ ಕಬಳಿಸಿಕೊಂಡಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿದ ಹರಿಹರ ಶಾಸಕ ಹಾಗೂ ರೈತರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದರ ಕಾಳಪ್ಪ, ಭದ್ರಪ್ಪ, ಆಕಾಶ್ ಬಣಕಾರ್, ಮಾರುತಿ ಯಾದವ್ ಇತರರಿದ್ದರು.



