ದಾವಣಗೆರೆ: ವೀರಶೈವ ಧರ್ಮದ ತಾಯಿ ಬೇರು ಪಂಚಾಚಾರ್ಯರು. 12ನೇ ಶತಮಾನದ ಬಸವಾದಿ ಶಿವಶರಣರು ಈ ಧರ್ಮ ವೃಕ್ಷದ ಹೂ ಹಣ್ಣು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಯಿ ಬೇರಿಗೆ ನೀರು ಎರೆಯದುದ್ದರೆ, ಹೂ ಹಣ್ಣು ಪಡೆಯಲು ಸಾಧ್ಯವಿಲ್ಲ. ಹೂಗಾಗಿ ಭಕ್ತರು ತಾಯಿ ಬೇರಿಗೆ ನೀರು ಎರೆಯುವ ಕೆಲಸವನ್ನು ಮಾಡಬೇಕಿದೆ ಎಂದರು.
ವೀರಶೈವ, ಲಿಂಗಾಯತ ಬೇರೆ ಅಲ್ಲ
ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮಕ್ಕೆ ಬಸವಾದಿ ಶರಣರು 12ನೇ ಶತಮಾನದಲ್ಲಿ ಮಾರುಹೋದರು. ರೇಣುಕಾಚಾರ್ಯರು ಪ್ರತಿಪಾದಿಸಿದ ವಿಚಾರಗಳನ್ನು ಬಸವಾದಿ ಶರಣರು ಕನ್ನಡದಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟರು. ವೀರಶೈವ ಧರ್ಮದ ತತ್ವ ಸಿದ್ಧಾಂತಗಳ ಅರಿವಿಲ್ಲದ ಜನರು ವೀರಶೈವ ಮತ್ತು ಲಿಂಗಾಯತ ಬೇರೆ ಎಂಬ ಧ್ವಂಧ್ವ ಹುಟ್ಟುಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗಾಯತ ರೂಢಿಗತ ಪದ
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಸೈದ್ಧಾಂತಿಕ ಪದ. ಲಿಂಗಾಯತ ರೂಢಿಗತ ಪದ. ಈ ಎರಡು ಪದಗಳಲ್ಲಿ ಪಂಚಾಚಾರ್ಯರು ಭೇದ-ಭಾವವ ಕಂಡಿಲ್ಲ. ಕೆಲವರು ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ಹಿನ್ನಡೆ ಆಗುತ್ತಿದೆ. ಬೆರಳೆಣಿಕೆಯಷ್ಟಿರುವ ಇವರಿಂದ ಧರ್ಮಕ್ಕೆ ಆಗುತ್ತಿರುವ ಅಪಾಯ ತಡೆಗಟ್ಟಬೇಕಿದೆ ಎಂದರು.



