ದಾವಣಗೆರೆ: ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ತುರ್ತು ಸಭೆ ಕರೆಯುವಂತೆ ನೆಲ ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ, ಬೃಹತ್ ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಕೆರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 538 ಕೆರೆಗಳಿವೆ.
- ಜಿಲ್ಲೆಯಲ್ಲಿ ಒಟ್ಟು ಕೆರೆಗಳ ಸಂಖ್ಯೆ 538
- ಮಳೆಗಾಲದಲ್ಲಿ ಭರ್ತಿಯಾಗಿದ್ದು 235 ಕೆರೆಗಳು ಮಾತ್ರ
- ಬೇಸಿಗೆ ಬರುವ ಮೊದಲೇ ಸಭೆ ಕರೆಯಲು ಮನವಿ
2024ರ ಮಳೆಗಾಲದ ಹಂಗಾಮಿನಲ್ಲಿ 235 ಕೆರೆಗಳು ಮಾತ್ರ ತುಂಬಿದ್ದು, ಇನ್ನುಳಿದ ಕೆರೆಗಳಲ್ಲಿ ಶೇ. 30-50ರಷ್ಟು ಮಾತ್ರ ನೀರು ತುಂಬಿದೆ. ಉಳಿದ ನೀರು ಸಮುದ್ರ ಸೇರಿರುತ್ತದೆ.
538 ಕೆರೆಗಳಿಂದ 40 ಟಿಎಂಸಿ ನೀರು ಸಂಗ್ರಹವಾಗಬೇಕಾಗಿದ್ದು, ಕೇವಲ 17 ಟಿಎಂಸಿ ಮಾತ್ರ ಕೆರೆಗೆ ಶೇಖರಣೆಯಾಗಿದ್ದು, ಉಳಿದ 23 ಟಿಎಂಸಿ ನೀರು ಸಂಬಂಧಿಸಿದ ಇಲಾಖೆಯವರ ಬೇಜಾವಾಬ್ದಾರಿಯಿಂದ ನೀರು ಸಮುದ್ರದ ಪಾಲಾಗಿದೆ ಮನವಿಯಲ್ಲಿ ವಿವರಿಸಿದ್ದಾರೆ.
ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಪಡುವ ಬದಲು ಬೇಸಿಗೆ ಬರುವ 3 ತಿಂಗಳ ಮೊದಲೇ ಸಭೆ ಕರೆದು ಸಂಬಂಧಿಸಿದ ಇಲಾಖೆ ಹೂಳು ತೆಗೆಯುವುದು, ಏರಿಯನ್ನು ಭದ್ರಗೊಳಿ ಸುವುದು, ಮುಖ್ಯ ಕಾಲುವೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಒತ್ತುವರಿ ತೆರವುಗೊಳಿಸುವುದು, ನೀರು ಬರುವ ಮಾರ್ಗವನ್ನು ಸರಳಿಕರಣಗೊಳಿಸುವುದು ಸೇರಿದಂತೆ ಈ ಎಲ್ಲಾ ವಿಷಯಗಳ ಬಗ್ಗೆ ತುರ್ತು ಸಭೆ ಕರೆಯಬೇಕೆಂದು ಸಮಿತಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಸಂಚಾಲಕ ಬಲ್ಲೂರು ರವಿಕುಮಾರ್, ಜಿಲ್ಲಾ ಸಂಚಾಲಕರಾದ ಮಿಯಾಪುರದ ತಿರುವ ಹೆಬ್ಬಾಳು ರಾಜಯೋಗಿ, ತಾಲ್ಲೂಕು ಸಂಚಾಲಕ ಸಾಣೇಹಳ್ಳಿ ಗುರುಮೂರ್ತಿ ಉಪಸ್ಥಿತರಿದ್ದರು.



