ದಾವಣಗೆರೆ: ಜಿಲ್ಲಾ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯರಾದ ರವೀಂದ್ರನಾಥ್ ಬಗ್ಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಗುರ ಮಾತು ಒಳ್ಳೆದಲ್ಲ. ಅವರ ನಡವಳಿಕೆಯಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಬೇಸರವಿದೆ ಎಂದು ಮಾಜಿ ಮೇಯರ್ ಅಜಯ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ – ದಾವಣಗೆರೆ ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದು ಎಸ್. ಎ. ರವೀಂದ್ರನಾಥ್. ಅವರ ಬಗ್ಗೆ ಮಾಜಿ ಸಂಸದರು ಹಗುರವಾಗಿ, ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ರವೀಂದ್ರನಾಥ್ ಅವರ ಬಗ್ಗೆ ಜಿಲ್ಲೆ ಹಾಗೂ ರಾಜ್ಯದ ಮುಖಂಡರಿಗೆ ಗೊತ್ತಿದೆ. ಜನಸಂಘದಿಂದ ಪಕ್ಷ ಕಟ್ಟಿ ಬೆಳೆಸಿದವರು. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಲು ಹಾಗೂ ಕಾರ್ಯಕರ್ತರು ಉಳಿಯಲು ಮೂಲ ಕಾರಣ ಎಸ್‌ಎಆರ್ ಎಂಬುದನ್ನು ಮರೆಯಬಾರದು.
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತ ಬಳಿಕ ಸಿದ್ದೇಶ್ವರ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಸಿದ್ದೇಶ್ವರ ಕುಟುಂಬ 8 ಬಾರಿ ಎಂಪಿ ಚುನಾವಣೆ ಎದುರಿಸಿದೆ. ಇದರಲ್ಲಿ 6 ಬಾರಿ ಜಿಲ್ಲೆ ಜನ ಗೆಲ್ಲಿಸಿದ್ದಾರೆ. ಸಿದ್ದೇಶಣ್ಣರ ತಂದೆ ಜಿ. ಮಲ್ಲಿಕಾರ್ಜುನಪ್ಪ ಎಂಪಿ ಆಗಲು ಹಾಗೂ ಸಿದ್ದೇಶ್ವರ ಅವರು ನಾಲ್ಕು ಬಾರಿ ಗೆಲ್ಲಲು ರವೀಂದ್ರನಾಥ್ ಅವರ ಕೊಡುಗೆ ಅಪಾರ. ಇದನ್ನು ಮಾಜಿ ಸಂಸದರು ಮರೆತಿದ್ದಾರೆ. ಬೇರೆಯವರ ಮೂಲಕ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ನಿಮ್ಮ ಈ ನಡವಳಿಕೆಯಿಂದ ಕಾರ್ಯಕರ್ತರಲ್ಲಿ ಬೇಸರವಾಗಿದೆ.
ರವೀಂದ್ರನಾಥ್ ಚುನಾವಣೆ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರೂ, ಅವರು ಕಾರ್ಯಕರ್ತರನ್ನು ಬೆಳೆಸುವ ಮುಂದಾಗಿದ್ದಾರೆ. ಇದೇ ಕಲಸವನ್ನು ನೀವು ಕೂಡ ಮಾಡಿದ್ರೆ ಒಳ್ಳೆದು. ಇನ್ನು ಎಷ್ಟು ದಿನ ಇಂತಹ ಹೇಳಿಕೆ ಕೊಡ್ತೀರಿ. ಹಿರಿಯರಾದ ನೀವು ಹಗುರ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಎಲ್ಲರು ಸೇರಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.
ದಾವಣಗೆರೆಯಲ್ಲಿ ಶಾಮನೂರು ಕುಟುಂಬ ಸೋಲಿಸುವ ಗಂಡು ನಾನೊಬ್ಬನೇ ಎನ್ನುತ್ತಿದ್ದರು. ಆದರೆ ಎಂಪಿ ಚುನಾವಣೆಯಲ್ಲಿ ಅವರು ಸೋತಿದ್ದು ಸ್ವಪ್ರತಿಷ್ಠೆ ಹಾಗೂ ಸ್ವ ಅಪರಾಧದಿಂದಲೇ ಹೊರತು ನಮ್ಮ ಟೀಂನಿಂದ ಅಲ್ಲ. ಹರಿಹರ ಶಾಸಕ ಬಿ. ಪಿ. ಹರೀಶ್ ಮುಂದಿಟ್ಟುಕೊಂಡು ಹೇಳಿಕೆ ಕೊಡಿಸುತ್ತಾರೆ. ಇಂಥವರ ಮಾತು ಕೇಳಿದ್ದಕ್ಕೆ ಸಿದ್ದೇಶ್ವರ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ಬಿಜೆಪಿ ಪಕ್ಷವು ಹೆತ್ತ ತಾಯಿ. ಅನ್ಯಾಯ ಮಾಡುವ ಜಾಯಮಾನ, ವ್ಯಕ್ತಿತ್ವ ನಮ್ಮದಲ್ಲ. ಹಿಂದೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಿಚಾರದಲ್ಲಿ ಬೇಸರವಾಗಿದ್ದು ನಿಜ. ಆದರೆ ನಂತರ ಪಕ್ಷಕ್ಕಾಗಿ ನಾವೆಲ್ಲಾ ಕೆಲಸ ಮಾಡಿದ್ದೇವೆ. ಬೇರೆಯವರನ್ನು ಬಿಟ್ಟು ನಿಂದಿಸುವುದು ಬೇಡ. ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತವೆ. ಈ ಚುನಾವಣೆಗಳಲ್ಲಿ ಬಿಜೆಪಿಯು ಜಿಲ್ಲೆಯಲ್ಲಿ ಗೆಲ್ಲಬೇಕಿದೆ. ಇದಕ್ಕೆ ಸಂಘಟನೆ ಆಗಬೇಕಿದೆ. ಒಗ್ಗಟ್ಟಿನಿಂದ ಪಕ್ಷ ಕಟ್ಟಿ ಕಾರ್ಯಕರ್ತರನ್ನು ಬೆಳೆಸಬೇಕಿದೆ ಎಂದರು.
ಸಿದ್ದೇಶಣ್ಣ ಪಕ್ಷ ಸಂಘಟನೆ ಬಿಟ್ಟು ಪಕ್ಷದ ಮುಖಂಡರ ಬಗ್ಗೆ ಆರೋಪ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹದಿನೈದು ದಿನಗಳೊಳಗಾಗಿ ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಎಲ್ಲರೂ ಒಂದಾಗುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ್, ಪಾಲಿಕೆಯ ಸದಸ್ಯ ಕೆ. ಎಂ. ವೀರೇಶ್ ಪೈಲ್ವಾನ್, ನಾಗರಾಜ್, ಚಂದ್ರಶೇಖರ್ ಪೂಜಾರ್, ಆಂಜಿನಪ್ಪ, ವಾಟರ್ ಮಂಜುನಾಥ್, ಎನ್. ಹೆಚ್. ಹಾಲೇಶ್, ಪ್ರವೀಣ್ ಜಾಧವ್, ಜಯಣ್ಣ ಇದ್ದರು.