ದಾವಣಗೆರೆ: ದಾವಣಗೆರೆಯ ಇತಿಹಾಸ ಪ್ರಸಿದ್ಧ ಆನೆಕೊಂಡ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಶ್ರಾವಣ ಮಾಸದ ಕಡೇ ಸೋಮವಾರದ ಕಾರ್ಣೀಕ ವಿಜೃಂಭಣೆಯಿಂದ ಜರುಗಿತು. ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಸೇರಿದಂತೆ 7 ಹಳ್ಳಿಗಳ ದೇವರ ಮೆರವಣಿಗೆ ನಂತರ ಕಾರ್ಣೀಕ ನಡೆಯಿತು.
ರಾಮ ರಾಮ ಎಂದು ನುಡಿದೀತಲೆ, ನರಲೋಕದ ಜನಕೆ ಆನೆ ತಣ್ಣೀರ ಉಗ್ಗೀತಲೆ, ಮುತೈದರ ಭೂತಾಯಿ ಉಡಿ ತುಂಬಿತಲೆ, ನರಲೋಕದ ಜನಕೆ ದೃಷ್ಟಿ ಹುಚ್ಚಾದೀತಲೇ ಪರಾಕ್… ಇದು ಈ ಬಾರಿಯ ಕಾರ್ಣೀಕ ನುಡಿ…ಕಡೇ ಸೋಮವಾರದಂದು ಹಿಂದಿನ ಕಾಲದಿಂದಲೂ ಶ್ರೀ ಬಸವೇಶ್ವರ ಕಾರ್ಣೀಕ ನಡೆಯುತ್ತಿದೆ. ಭವಿಷ್ಯದ ಸೂಕ್ಷ್ಮಗಳನ್ನು ನೀಡುವ ಕಾರ್ಣೀಕವನ್ನು ಆಲಿಸಲು, ಸ್ವಾಮಿ ದರ್ಶನಕ್ಕಾಗಿ ಈ ಬಾರಿಯೂ ಸಹಸ್ರಾರು ಭಕ್ತರು ಆಗಮಿಸಿದ್ದರು. ಪದ್ಧತಿಯಂತೆ ಆಚರಣೆಗಳ ಜೊತೆಗೆ ನೀಲಾನಹಳ್ಳಿಯ ಅರ್ಚಕ, ದಾಸಯ್ಯ ಸುತ್ತಲಿನ ಹಳ್ಳಿಗಳ ದೇವರುಗಳ ಪಲ್ಲಕ್ಕಿ ಸಮ್ಮುಖ ಕಾರ್ಣೀಕ ನುಡಿದರು.
ಈ ಬಾರಿಯ ಕಾರ್ಣೀಕದಲ್ಲಿ ರಾಮ ರಾಮ ಎಂದು ನುಡಿದೀತಲೆ ಅಂದ್ರೆ, ರಾಮ ಮಂದಿರ ಸ್ಥಾಪನೆಯಾಗಿದೆ . ನರಲೋಕದ ಜನಕೆ ಆನೆ ತಣ್ಣೀರ ಉಗ್ಗೀತಲೆ ಎಂದರೆ, ದುಷ್ಟರಿಗೆ ಸಂಕಷ್ಟ ಶುರುವಾಗಿದೆ. ಮುತ್ತೈದೆಯರ ಉಡಿ ತುಂಬುವಷ್ಟು ಉತ್ತಮ ಮಳೆ, ಬೆಳೆಯಾಗಲಿದೆ. ನರಲೋಕದ ಜನರೆ ದೃಷ್ಟಿ ಹುಚ್ಚಾದೀತಲೆ ಅಂದರೆ ಈಗಿನ ಕೆಡುಕು, ಅಪಾಯನ್ನು ಸೂಚ್ಯವಾಗಿ ಹೇಳಿದಂತಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಇತರರು ದೇವಸ್ಥಾನಕ್ಕ ಭೇಟಿ ನೀಡಿ, ಸ್ವಾಮಿ ದರ್ಶನ ಪಡೆದರು. ದೇವಸ್ಥಾನ ಸಮಿತಿ ಕನ್ವೀನರ್ ಎಂ.ರೇವಣಸಿದ್ದಯ್ಯ, ಧರ್ಮದರ್ಶಿಗಳ ಸಮಿತಿ, ಗ್ರಾಮಸ್ಥರು, ಭಕ್ತರು ಇದ್ದರು.



