ದಾವಣಗೆರೆ: ಬ್ಯಾಂಕುಗಳಿಂದ ಪಡೆಯುವ ಸಾಲವನ್ನು ನಿಗದಿತ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಂಡು, ಸರಿಯಾದ ಸಮಯಕ್ಕೆ ಮರು ಪಾವತಿ ದೃಢ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ನೀಡಿದರು.
ನಗರದ ತೋಗಟವೀರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಹಾಗೂ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಆಜಾದಿಕಾ ಅಮೃತ್ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬ್ಯಾಂಕ್ ಗಳಿಂದ ಪಡೆಯುವ ಸಾಲ ಸದ್ಬಳಕೆ ಮಾಡಿಕೊಳ್ಳುವವರು ಬೆಳೆಯುತ್ತಾ ಹೋಗುತ್ತಾರೆ. ಸಾಲ ಪಡೆದ ಉದ್ದೇಶಕ್ಕೆ ಬಳಸದೆ ಅನ್ಯ ಉದ್ದೇಶಕ್ಕೆ ಬಳಸಿದ್ರೆ ದೀವಾಳಿ ಆಗುತ್ತಾರೆ. ಹೀಗಾಗಿ ಸಾಲ ಮರು ಪಾವತಿ ಮಾಡುವ ದೃಢ ಸಂಕಲ್ಪ ಮಾಡಿ ಬ್ಯಾಂಕುಗಳಿಂದ ಸಾಲ ಪಡೆಯಬೇಕು ಎಂದು ತಿಳಿಸಿದರು.
ಬಹಳಷ್ಟು ಜನ ನಾವು ಬ್ಯಾಂಕುಗಳಿಂದ ಸಾಲ ಪಡೆದು, ಮರು ಪಾವತಿ ವಿಳಂಬ ಮಾಡುವುದರಿಂದ ಸಾಲ ಎರಡು ಪಟ್ಟು ಬೆಳೆದಿರುತ್ತದೆ. ಹೀಗಾಗಿ ಬಡ್ಡಿ ಬಿಡಿಸಿ, ಅಸಲು ಕಟ್ಟುತ್ತೇವೆಂದು ನನ್ನ ಬಳಿ ಬರುತ್ತಾರೆ. ಹೀಗಾದರೆ ದೇಶದ ಬೆಳೆಯುವುದಾದರೂ ಹೇಗೆ? ಕೊರೊನಾದಿಂದ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಸಾಲ ಪಡೆದವರು ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮರು ಪಾವತಿ ಮಾಡಬೇಕೆಂದು ಸಲಹೆ ನೀಡಿದರು.ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುವಲ್ಲಿ ಕಟ್ಟಕಡೆಯ ವ್ಯಕ್ತಿಯ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಸಾಲ ಕೊಡುವ ವ್ಯವಸ್ಥೆ ಹೊಸದೇನಲ್ಲ. ಪ್ರಾಚೀನ ಕಾಲದಿಂದಲೂ ಸಾಲ ಕೊಡುವುದು, ವಾಪಸ್ ಕಟ್ಟುವುದು ಸಾಮಾನ್ಯ. ಈ ಬಗ್ಗೆ ಮನು ಸ್ಮೃತಿಯಲ್ಲೂ ಉಲ್ಲೇಖವಿದೆ. ಆಧುನಿಕ ಜಗತ್ತಿನಲ್ಲಿ ದೇಶ ಬೆಳೆಯಬೇಕಾದರೆ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.ಬ್ಯಾಂಕ್‌ಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಬ್ಯಾಂಕಿಂಗ್ ವ್ಯಾಪ್ತಿಯಲ್ಲಿ ತಂದಿವೆ. ಕೋವಿಡ್ ಪ್ಯಾಕೇಜ್‌ಗಳ ಪರಿಹಾರವನ್ನು ಜನ್‌ಧನ್ ಖಾತೆಗಳ ಮೂಲಕ ಜನರಿಗೆ ತಲುಪಿಸಲು ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ಹಲವರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಎಚ್.ರಘು ರಾಜ, ಎಸ್‌ಬಿಐ ಸಹಾಯಕ ಮಹಾ ಪ್ರಬಂಧಕ ರತನ್‌ಕುಮಾರ್ ರತ್ನ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ನಾಗೇಶ್ ಪ್ರಭು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲರೆಡ್ಡಿ, ನಬಾರ್ಡ್ ಡಿಡಿಎಂ ವಿ.ರವೀಂದ್ರ, ಡಿಸಿಸಿ ಬ್ಯಾಂಕ್ ಸಿಇಒ ತಾರ‍್ಯಾ ನಾಯ್ಕ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಗಣೇಶ್‌ರಾವ್ , ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ ಡಿ. ಶಾಸ್ತ್ರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೆ.ರಾಘವೇಂದ್ರ ನಾಯರಿ ಸೇರಿದಂತೆ ಮತ್ತಿತರರು ುಪಸ್ತಿತರಿದ್ದರು.



