ದಾವಣಗೆರೆ: ಮುಂಗಾರು ಮಳೆ ಅಬ್ಬರಿಸುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಹರಿಹರ ಬಳಿ ಹಾಯ್ದು ಹೋಗುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ತುಂಗಭದ್ರ ನದಿ ಹಿನ್ನೀರು ಸ್ಮಶಾನಕ್ಕೆ ನುಗ್ಗಿದೆ. ಇಡೀ ಸ್ಮಶಾನ ಜಲಾವೃತವಾಗಿ ಶವಸಂಸ್ಕಾರಕ್ಕೆ ಜನರು ಪರದಾಟ ನಡೆಸಿದರು. ಈ ಘಟನೆ ಹರಿಹರ ಹೊರ ವಲಯದ ಗುತ್ತೂರಿನಲ್ಲಿ ಗನಡೆದಿದೆ.
ಗುತ್ತೂರಿನ ಮಂಜಪ್ಪ ಎಚ್.ಎಂ.ಸಿ.(70) ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ಸ್ಮಶಾನ ತುಂಬಾ ನೀರು ತುಂಬಿತ್ತು. ನದಿ ಮೈದುಂಬಿ ಹರಿಯುತ್ತಿದ್ದು, ಶವಸಂಸ್ಕಾರ ಹೇಗೆ ಮಾಡುವುದೆಂಬ ಚಿಂತೆ ಸಂಬಂಧಿಕರಿಗೆ ಶುರುವಾಯಿತು. ಕೊನೆಗೆ ಶವವನ್ನು ಎತ್ತಿಕೊಂಡು ಸೊಂಟ ಮಟ್ಟದ ನದಿ ನೀರಲ್ಲೆ ಸಾಗಿ ಎತ್ತರದ ಪ್ರದೇಶದಲ್ಲಿ ಶವಸಂಸ್ಕಾರ ನೆರೆವೇರಿಸಿದರು.ಸಂಬಂಧಿಕರು ನದಿ ತೀರದಲ್ಲೆ ನಿಂತು ಶವ ಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದರು.
ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಅಕ್ರಮ ಮಣ್ಣು, ಮರಳುಗಾರಿಕೆಯ ಪರಿಣಾಮ ನದಿ ನೀರು ಸ್ಮಶಾನಕ್ಕೆ ನುಗ್ಗುತ್ತದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಎತ್ತರದ ಪ್ರದೇಶದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.



