ದಾವಣಗೆರೆ: ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಲಿಂಕ್ ಮತ್ತು ಸರ್ಕಾರಿ ಲ್ಯಾಂಡ್ ಬೀಟ್ ಪ್ರಗತಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ತಾಂತ್ರಿಕತೆಯ ನೈಪುಣ್ಯತೆಯನ್ನು ಕಂದಾಯ ಇಲಾಖೆ ಸಿಬ್ಬಂದಿಗಳು ಹೆಚ್ಚಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಆಚರಿಸಲಾದ ಕಂದಾಯ ದಿನಾಚರಣೆಯಲ್ಲಿ ಮಾತನಾಡಿದರು. ರೈತರ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಮಾಡುವ ಕೆಲಸ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದ್ದು ಸರ್ಕಾರಿ ಜಮೀನುಗಳ ಒತ್ತುವರಿಯಾಗದಂತೆ ತಡೆಗಟ್ಟಲು ಲ್ಯಾಂಡ್‍ಬೀಟ್ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು ಇವೆರಡರಲ್ಲಿಯೂ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಇತರೆ ಇಲಾಖೆಗಳಿಗಿಂತಲೂ ಕಂದಾಯ ಇಲಾಖೆಯ ಜವಾಬ್ದಾರಿ ಹೆಚ್ಚಿದೆ. ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ಇಲಾಖೆಯಾಗಿದೆ. ಕಂದಾಯ ಇಲಾಖೆ ಆಧುನಿಕತೆಯತ್ತಾ ದಾಪುಗಾಲಿಟ್ಟಿದ್ದು ಡಿಜಿಟಲೀಕರಣವಾಗುತ್ತಿದೆ. ಆದ್ದರಿಂದ ಕಂದಾಯ ಇಲಾಖೆಯಲ್ಲಿನ ಎಲ್ಲಾ ಸಿಬ್ಬಂದಿಗಳು ತಾಂತ್ರಿಕ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಾರ್ವಜನಿಕರ ಸೇವೆ ಮಾಡಲು ಮುಂದಾಗಬೇಕಾಗಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಇಲಾಖೆ ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಸುಲಭವಾಗಿ ಸೇವೆ ನೀಡುವಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಶ್ರೀ, ಅಭಿಷೇಕ್ ಹಾಗೂ ತಹಶೀಲ್ದಾರರು, ಸಿಬ್ಬಂದಿಯವರು ಉಪಸ್ಥಿತರಿದ್ದರು.