ದಾವಣಗೆರೆ: ಮುಂದಿನ ತಿಂಗಳಿನಿಂದ ಮುಂಗಾರು ಮಳೆ ಆಗಮನ ಹಿನ್ನೆಲೆ ಕೃಷಿ ಕಾರ್ಯದ ಅಗತ್ಯ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಸಂವಾದ ನಡೆಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ ಸೇರಿ ಅಗತ್ಯ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮುಖ್ಯಮಂತ್ರಿಗೆ ವರದಿ ಒಪ್ಪಿಸಿದರು. ಜೂನ್ ತಿಂಗಳ ಮೊದಲ ವಾರದಿಂದ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕೆಂದು ಸಿಎಂ ತಿಳಿಸಿದರು.
ರೈತರಿಗೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲಾಗಿದ್ದು, ಯಾವ ರೈತರಿಗೆ ತಲುಪಿಲ್ಲವೋ ಅಂತಹ ರೈತರ ದಾಖಲೆ ಸರಿಪಡಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್, ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.



