Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಭವನ ಅನಾವರಣ

ದಾವಣಗೆರೆ

ದಾವಣಗೆರೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಭವನ ಅನಾವರಣ

ದಾವಣಗೆರೆ: ಅಭಿವೃದ್ದಿ ಹೊಂದಿದ ಹಾಗೂ ಏಕ ರಾಷ್ಟ್ರ ಮತ್ತು ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಗುರಿಯನ್ನು ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲ ಪ್ರಯತ್ನಗಳ ಅವಶ್ಯಕತೆ ಇದೆ ಎಂದು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮೃತ ಮಹೋತ್ಸವ ಭವನ ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಾಂತ್ರಿಕ ಶಿಕ್ಷಣದಿಂದ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಮೂಲಕ, ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಾಂತ್ರಿಕತೆ ಪ್ರಮುಖ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನಗಳನ್ನು ಉತ್ತೇಜಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ತಂತ್ರಜ್ಞಾನವು ನಾವು ಊಹಿಸುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ನಮ್ಮ ಸಂಶೋಧಕರು, ವಿಜ್ಞಾನಿಗಳು ಮತ್ತು ತಜ್ಞರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಯೋಜಿಸುವುದು ಅವಶ್ಯಕವಾಗಿದೆ. ‘ಡಿಜಿಟಲ್ ಇಂಡಿಯಾ’ ಅಭಿಯಾನದಲ್ಲಿ ನಮ್ಮ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ತಮ್ಮ ಸಕ್ರಿಯ ಪಾತ್ರವನ್ನು ವಹಿಸುವ ಅಗತ್ಯವಿದೆ. ಪ್ರಸ್ತುತ ಉತ್ಪಾದನೆ ಮತ್ತು ಉದ್ಯಮಶೀಲತೆಯ ಯುಗವಾಗಿದೆ ಎಂದರು.

ಸ್ವಾಮಿ ವಿವೇಕಾನಂದರ “ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ.” ಎಂಬ ಸಂದೇಶವನ್ನು ಸ್ಮರಿಸಿದ ರಾಜ್ಯಪಾಲರು, ಈ ಸಂಕಲ್ಪದಿಂದ ನಮ್ಮ ಯುವಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. 76 ವರ್ಷಗಳ ಸ್ವಾತಂತ್ರ್ಯದ ನಂತರದ ಪಯಣದಲ್ಲಿ ದೇಶವು ಅನೇಕ ಸವಾಲುಗಳನ್ನು ಎದುರಿಸಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಸಾಧಿಸುವ ಮೂಲಕ ಭಾರತವು ಬಾಹ್ಯಾಕಾಶ ಸಂಶೋಧನೆ, ಚಂದ್ರಯಾನ ಮಿಷನ್, ಮಂಗಳಯಾನ ಮತ್ತು ಇಂಟರ್ನೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಗುರುತನ್ನು ಸೃಷ್ಟಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ ಸ್ವಾವಲಂಬಿ ಭಾರತವು ಪ್ರಪಂಚದಾದ್ಯಂತ ತನ್ನ ಖ್ಯಾತಿಯನ್ನು ಹೆಚ್ಚಿಸಿದೆ. ಆರ್ಥಿಕ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ, ಕೈಗಾರಿಕೆ, ಕೃಷಿ, ಶಿಕ್ಷಣ ಮತ್ತು ಆಧುನೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ 1951ರಲ್ಲಿ ಪ್ರಾರಂಭವಾದ ಬಿಡಿಟಿ ರಾಜ್ಯದ ಏಕೈಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಾಗಿದೆ. ಮೊದಲು ಸಿವಿಲ್ ಇಂಜಿನಿಯರಿಂಗ್ ಶಾಖೆಯೊಂದಿಗೆ ಆರಂಭವಾದ ಕಾಲೇಜು ಪ್ರಸ್ತುತ ಯುಜಿ ಮತ್ತು ಪಿಜಿ ಮಟ್ಟದಲ್ಲಿ ಎಂಜಿನಿಯರಿಂಗ್‍ನ ಹಲವು ಶಾಖೆಗಳಿವೆ. ಇದರೊಂದಿಗೆ ಎಂಬಿಎ, ಎಂಸಿಎ ಇತ್ಯಾದಿ ಕೋರ್ಸ್‍ಗಳಿವೆ. ಈ ಕಾಲೇಜಿನ ಕಟ್ಟಡ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ ಗೌರವಾನ್ವಿತ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪ ನವರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಆಧುನಿಕ ಮೂಲಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗಿದೆ. ಮೆಕಾಟ್ರಾನಿಕ್ಸ್, ರೊಬೊಟಿಕ್ಸ್, ಹೈಡ್ರಾಲಿಕ್ಸ್ ಮತ್ತು ನ್ಯೂಮ್ಯಾಟಿಕ್ಸ್ ಹೊರತುಪಡಿಸಿ ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸುಧಾರಿತ ತರಬೇತಿಗಾಗಿ ಈ ಕೇಂದ್ರವು ಅವಕಾಶವನ್ನು ಹೊಂದಿದೆ. ಇಲ್ಲಿ ಅಮೃತ ಮಹೋತ್ಸವ ಭವನವನ್ನು ನಿರ್ಮಿಸುವ ಮೂಲಕ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಧಾರಿತ ಮೂಲಸೌಕರ್ಯವನ್ನು ಒದಗಿಸಲು ವಿಶ್ವವಿದ್ಯಾನಿಲಯ ಪ್ರಯತ್ನಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ ದಾವಣಗೆರೆಯಲ್ಲಿ ಹಿಂದೆ ಸಾಕಷ್ಟು ಕಾಟನ್ ಮಿಲ್‍ಗಳು ಇದ್ದುದರಿಂದ ಮ್ಯಾಂಚೇಸ್ಟರ್ ಎಂದೇ ಕರೆಯಲಾಗುತ್ತಿತ್ತು. ಈ ಕಾಲೇಜು ಕಟ್ಟಲು ದೇವೇಂದ್ರಪ್ಪ, ತವನಪ್ಪ ಕುಟುಂಬ ಅಂದಿನ ಕಾಲದಲ್ಲಿ ರೂ.5 ಲಕ್ಷ ದೇಣಿಗೆ ನೀಡಿದ್ದರು. ಇಂದು ಅತ್ಯುತ್ತಮ ಕಾಲೇಜಾಗಿ ಬೆಳೆದಿದೆ. ಕಾಲೇಜು ಮೊದಲು ಮೈಸೂರು ವಿ.ವಿ. ನಂತರ ಕುವೆಂಪು ವಿವಿ ಹಾಗೂ ದಾವಣಗೆರೆ ವಿವಿ ವ್ಯಾಪ್ತಿಗೆ ಬಂದಿತು. ತಾಂತ್ರಿಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಬೇಕೆಂದು ವಿಟಿಯುಗೆ ಸೇರಿಸಲಾಗಿದ್ದು ಇದು ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಆಗಿದೆ.
ಇಲ್ಲಿನ ಪ್ರಾಧ್ಯಾಪಕರ ವೇತನ ಸೇರಿದಂತೆ ಎಲ್ಲಾ ಆಡಳಿತಾತ್ಮಕ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.4 ಕೋಟಿ ಬೇಕಾಗಿದ್ದು ಇದರ ನಿರ್ವಹಣೆ ಕಷ್ಟವಾಗುತ್ತಿದ್ದು ಸರ್ಕಾರದಿಂದ ವೇತನ ನೀಡಲು ವಿಸಿ ಮನವಿ ಮಾಡಿದ್ದಾರೆ. ಈ ಹಿಂದೆ ವಿಶ್ವವಿದ್ಯಾನಿಲಯದಲ್ಲಿ ರೂ.500 ಕೋಟಿ ಠೇವಣಿ ಇದ್ದು ಆದಾಯ ತೆರಿಗೆ ಪಾವತಿಸಿಲ್ಲ ಎಂದು ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದರಿಂದ ವಿಶ್ವವಿದ್ಯಾನಿಲಯ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತಕರಾರನ್ನು ಇತ್ಯರ್ಥ ಮಾಡಿ ಠೇವಣಿ ಆದಷ್ಟು ಬೇಗ ವಾಪಸ್ ಕೊಡಿಸಬೇಕೆಂದರು.

ಉನ್ನತ ಶಿಕ್ಷಣ ಸಚಿವ ಡಾ; ಎಂ ಸಿ ಸುಧಾಕರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ದಾವಣಗೆರೆಯಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಯಾಗಿ ಒಂದೂವರೆ ವರ್ಷ ನಡೆದ ಇಲ್ಲಿನ ಘಟನೆಗಳನ್ನು ಸ್ಮರಿಸುತ್ತಾ ಇಂದು ಉನ್ನತ ಶಿಕ್ಷಣ ಸಚಿವನಾಗಿದ್ದೇನೆ ಎಂದು ತನ್ನ ಸಂತೋಷ ವ್ಯಕ್ತಪಡಿಸಿದರು.

ಸಂಸದರಾದ ಡಾ. ಜಿ. ಎಂ. ಸಿದ್ದೇಶ್ವರ್, ಹರಿಹರ ಶಾಸಕರಾದ ಬಿ.ಪಿ.ಹರೀಶ್ ಉಪಸ್ಥಿತರಿದ್ದರು. ವಿಟಿಯು ಕುಲಪತಿ ಪ್ರೊ ವಿದ್ಯಾಶಂಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಡಿಟಿ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಪಿ. ನಾಗರಾಜಪ್ಪ ವಂದಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top