ದಾವಣಗೆರೆ: ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಬಳ್ಳಾರಿಯ ಬಾಸ್ಕೆಟ್ ಬಾಲ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಶಿವಮೊಗ್ಗ ಬಾಸ್ಕೆಟ್ ಬಾಲ್ ಕ್ಲಬ್ ತಂಡಗಳು ಫೈನಲ್ ತಲುಪಿದವು.ಅತ್ಯಂತ ರೋಮಾಂಚನಕಾರಿಯಾಗಿ ಕೂಡಿದ್ದ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡ ಒಂದು ಅಂಕದಿಂದ (55-54) ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು. ದಾವಣಗೆರೆ ತಂಡವು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮೂರನೇ ಸ್ಥಾನವನ್ನು ಬಳ್ಳಾರಿ ಬಾಸ್ಕೆಟ್ ಬಾಲ್ ಕ್ಲಬ್ ತನ್ನದಾಗಿಸಿಕೊಂಡಿತು.
ಇದೇ ಸಂದರ್ಭದಲ್ಲಿ 16 ವರ್ಷ ವಯೋಮಿತಿ ಒಳಗಿನ ಬಾಲಕರ ಮತ್ತು ಬಾಲಕಿಯರ ಆಹ್ವಾನಿತ ಲೀಗ್ ಪಂದ್ಯವನ್ನು ಕೂಡ ಆಯೋಜಿಸಲಾಗಿತ್ತು. ಎರಡೂ ವಿಭಾಗದಲ್ಲೂ ದಾವಣಗೆರೆ ತಂಡಗಳು ಮೊದಲನೇ ಸ್ಥಾನ ಹಾಗೂ ಹೊಸಪೇಟೆ ತಂಡಗಳು ದ್ವಿತೀಯ ಸ್ಥಾನ ಪಡೆದವು.ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಮೊದಲ ಬಾರಿಗೆ ದಾವಣಗೆರೆ ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿತ್ತು. ಫೈನಲ್ ತಲುಪಿದ ಎರಡು ತಂಡಗಳು ಬೆಂಗಳೂರಿನಲ್ಲಿ ನಡೆಯುವ ಫೈನಲ್ ಹಂತದ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡವು. ಪಂದ್ಯಾವಳಿಯ ಅತ್ಯುತ್ತಮ ಶೂಟರ್ ಆಗಿ ಶಿವಮೊಗ್ಗ ತಂಡದ ಅನಿಲ್ ರಾಜ್ ಅವರು ಹಾಗೂ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ದಾವಣಗೆರೆಯ ರವಿರಾಜ್ ಆಯ್ಕೆಗೊಂಡರು.
ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಮಂಜುನಾಥ ಗಡಿಗುಡಾಳ್, ಹಿರಿಯ ಬ್ಯಾಸ್ಕೆಟ್ಬಾಲ್ ಕ್ರೀಡಾಪಟುಗಳಾದ ಸಂಗಪ್ಪನವರು, ಶಾಂತಿನಾಥ್ ಬೋಂಡಾಳೆ, ರವಿ ಪಲ್ಲಗಟ್ಟಿ, ವಿಜಯ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆಯ ಉಪಾಧ್ಯಕ್ಷ ಗುಣಶೇಖರ್ , ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಸಹ ಕಾರ್ಯದರ್ಶಿ ದೇವಗಿರಿ ಪ್ರಭಾಕರ್ ಎಲ್ಲರನ್ನೂ ಸ್ವಾಗತಿಸಿದರು.



