ದಾವಣಗೆರೆ; ಎಲ್ಲೆಡೆ ಕಿತ್ತು ಹೋಗಿರುವ ರಸ್ತೆ, ಸಣ್ಣ ರಸ್ತೆಯಿಂದ ಹಿಡಿದು ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದ್ರೂ ಗುಂಡಿ, ಗುಂಡಿ, ಗುಂಡಿ….! ಅಯ್ಯೋ, ಇದೇನು ಮಹಾನಗರ ಪಾಲಿಕೆ ರಸ್ತೆಗಳೋ…, ಗ್ರಾಮೀಣ ಭಾಗದ ರಸ್ತೆನೋ.. ಅನ್ನುವಷ್ಟು ದಾವಣಗೆರೆ ನಗರದ ರಸ್ತೆಗಳು ಕೆಟ್ಟು ಹೋಗಿದ್ದವು. ವಾಹನ ಸವಾರರಂತೂ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಕೆಲವು ಕಡೆ ಸಾರ್ವಜನಿಕರೇ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಇದರಿಂದ ಕೊನೆಗೂ ಎಚ್ಚೆತ್ತ ಪಾಲಿಕೆ, ಇಂದು ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದೆ. ಮೇಯರ್ ಜಯಮ್ಮ ಗೋಪಿನಾಯ್ಕ್ ಅವರು ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದರು. ಕೇವಲ ಗುಂಡಿಗಳಿಗೆ ಮಣ್ಣು ಕಲ್ಲು ಹಾಕಿದರೆ ಸಾಲದು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ಮೇಯರ್ ಗಾಯಿತ್ರಿಬಾಯಿ, ಮಾಜಿ ಮೇಯರ್ ಎಸ್. ಟಿ. ವೀರೇಶ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಪಾಲಿಕೆಯ ಅಭಿಯಂತಕರು ಉಪಸ್ಥಿತರಿದ್ದರು.