ದಾವಣಗೆರೆ: ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿ ನಿಂತಿದ್ದ ಮಹಿಳೆ ಕೈಯಲ್ಲಿದ್ದ ಚಿನ್ನಾಭರಣವಿದ್ದ ಬ್ಯಾಗ್ ಸುಲಿಗೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 7.20 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಸಾಸ್ವೆಹಳ್ಳಿ ಗ್ರಾಮದ ಇಮ್ರಾನ್ ಖಾನ್ ತಮ್ಮ ಹೆಂಡತಿಯೊಂದಿಗೆ ದಾವಣಗೆರೆಗೆ ಬಂದು ಸಂಬಂದಿಕರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ತಮ್ಮ ಊರಿಗೆ ಹೋಗುವಾಗ ಟೀ ಕುಡಿಯಲು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋದಾಗ ಹೆಂಡತಿಯು ತಮ್ಮ ಕಾರ್ ಬಳಿ ನಿಂತಿದ್ದಾಗ ಯಾರೋ ಒಬ್ಬ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್ ಸುಲಿಗೆ ಮಾಡಿಕೊಂಡು ಹೋಗಿದ್ದನು.
ಈ ಬಗ್ಗೆ ಸುಲಿಗೆ ಮಾಡಿಕೊಂಡು ಹೋದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ ಕೊಡಿ ಎಂದು ಅ.29 ರಂದು ದೂರು ನೀಡಿದ ಮೇರೆಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್. ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣದ ಆರೋಪಿ ಶಫಿವುಲ್ಲಾ ತಂದೆ ನಜೀರ್ ಸಾಬ್, 35 ವರ್ಷ, ಗಾರೆ ಕೆಲಸ ಹಾಲಿ ವಾಸ-1ನೇ ಮೇನ್ 17ನೇ ಕ್ರಾಸ್ ಭಾಷನಗರ ದಾವಣಗೆರೆ, ಖಾಯಂ ವಿಳಾಸ- ಬೆಂಕಿನಗರ ಹರಿಹರ ಇವನನ್ನು ವಶಕ್ಕೆ ಪಡೆಯಲಾಗಿದೆ.
ಕೂಲಂಕುಷವಾಗಿ ವಿಚಾರಣೆ ಮಾಡಿ ಆರೋಪಿಯಿಂದ ಒಟ್ಟು 7,20,000/- ರೂ ಬೆಲೆಯ ಒಟ್ಟು 80 ಗ್ರಾಂ ಬಂಗಾರದ ಆಭರಣಗಳನ್ನುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರ ಸುನೀಲ್ ಕುಮಾರ್. ಹೆಚ್. ಎಸ್. ರವರು, ಪಿ.ಎಸ್.ಐ ಲತಾ.ಆರ್., ನಿಸ್ತಂತು ವಿಭಾಗದ ಪೊಲೀಸ್ ಉಪನಿರೀಕ್ಷಕ ಸಂತೋಷ್ ಮಾಳಗಿ & ನಿತೇಶ್ ಕುಮಾರ್ ಹಾಗು ಕೆಟಿಜೆ ನಗರ ಠಾಣಾ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ಗೌರಮ್ಮ ,ಅನಿತಾ ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



