ದಾವಣಗೆರೆ: ಹೆಬ್ಬಾಳ್ ಟೋಲ್ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕರ್ತವ್ಯ ನಿರತ ಡಿಎಆರ್ ಪೊಲೀಸ್ ಸಿಬ್ಬಂದಿ ಮೇಲೆ ಲಾರಿಯೊಂದು ಹರಿದ ಪರಿಣಾಮ ಪೊಲೀಸ್ ಕಾನ್ ಸ್ಟೇಬಲ್ ಸಾ*ವನ್ನಪ್ಪಿದ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಚಾಲಕ, ಲಾರಿಯೊಂದಿಗೆ ಪರಾರಿಯಾಗಿದ್ದಾನೆ.
ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು (DAR) ಕಾನ್ಸ್‌ಟೇಬಲ್ ರಾಮಪ್ಪ ಪೂಜಾರಿ (32) ಸಾವನ್ನಪ್ಪಿದ್ದಾರೆ. ಟ್ರಾಫಿಕ್ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತುದ್ದಾಗ ಈ ಘಟನೆ ನಡೆದಿದೆ. ದುರ್ಘಟನೆ ಕುಟುಂಬಕ್ಕೆ ಆಘಾತವನ್ನುಂಟುಮಾಡಿದೆ.
ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ದಾವಣಗೆರೆಯ ರಾಮಪ್ಪ ಪೂಜಾರಿ ಲಾರಿಯೊಂದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಲಾರಿ ಚಾಲಕ ಲಾರಿಯನ್ನ ನಿಲ್ಲಿಸದೇ ಪೇದೆ ಮೇಲೆ ಲಾರಿ ಹರಿಸಿ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಶವಗಾರದ ಮುಂದೆ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದ್ದು, ಒಂದು ದಿನದ ಹಿಂದೆ ರಾಮಪ್ಪ ತನ್ನ ಒಂದು ವರ್ಷದ ಮಗಳ ಹುಟ್ಟು ಹಬ್ಬ ಆಚರಣೆ ಮಾಡಿದ್ದರು. ಮದುವೆಯಾಗಿ ಅವರಿಗೆ ಒಂದು ವರ್ಷವಷ್ಟೇ ಆಗಿತ್ತು.
ಘಟನೆಯ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ಐಜಿಪಿ ರವಿಕಾಂತೇಗೌಡ, ಡಿವೈಎಸ್ಪಿ ಶರಣಬಸವೇಶ್ವರ ಸೇರಿದಂತೆ ಸಿಬ್ಬಂದಿಗಳು ಆಗಮಿಸಿದ್ದರು.ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ಸರಿಯಾದ ಸಿಸಿ ಟಿವಿ ಅಳವಡಿಸಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ, ಇದರಿಂದ ಈ ಘಟನೆಯೂ ಕ್ಯಾಮೆರಾದಲ್ಲಿ ಸರಿಯಾಗಿ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ಟೋಲ್ ಸಿಬ್ಬಂದಿ ವಿರುದ್ದ ಗರಂ ಆಗಿದ್ದಾರೆ.



