ಬೆಂಗಳೂರು: ಎಡಿಟ್ ಮಾಡಿದ ಅಶ್ಲೀಲ ವಿಡಿಯೋ ತೋರಿಸಿ ದಾವಣಗೆರೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಹನಿಟ್ರ್ಯಾಪ್‌ಗೆ ಬೀಸಲು ಯತ್ನಿಸಿದ ದಾವಣಗೆರೆ ಮೂಲದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಅಜಯ್ ಮತ್ತು ಅಭಿ ಬಂಧಿತ ಆರೀಪಿಗಳು. 2 ಕೋಟಿ ರೂ.ಗೆ ಬೇಡಿಕೆಯೊಡ್ಡಿ, ಕೊನೆಗೆ 40 ಲಕ್ಷ ರೂ.ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಧಮ್ಕಿ ಹಾಕಿದ್ದರು. ಈ ಬಗ್ಗೆ 68 ವರ್ಷದ ನಿವೃತ್ತ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ದಾವಣಗೆರೆ ಮೂಲದ ನಿವೃತ್ತ ಇಂಜಿನಿಯರ್‌ಗೆ ಅಜಯ್ ಕರೆ ಮಾಡಿ, ಜಿಲ್ಲಾ ಕೋರ್ಟ್ ಬಳಿಗೆ ಬರುವಂತೆ ಸೂಚಿಸಿದ್ದ. ಅಲ್ಲಿಗೆ ಹೋದಾಗ ಆರೋಪಿಗಳು, ನಿಮ್ಮ ಅಶ್ಲೀಲ ವಿಡಿಯೋ ನಮ್ಮ ಬಳಿ ಇದೆವೆಂದು ಹೆದರಿಸಿ ಹೋಗಿದ್ದರು. ಮತ್ತೆ 10 ದಿನಗಳ ಬಳಿಕ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಹೋಟೆಲ್‌ವೊಂದರ ಬಳಿ ಕರೆದು ಇದೇ ವಿಚಾರ ಪ್ರಸ್ತಾಪಿಸಿದ್ದರು.
ಇದಾದನಂತರ ಮಾ.13ರಂದು ಎಡಿಟ್ ಮಾಡಿರುವ ವಿಡಿಯೋವನ್ನು ವಾಟ್ಸಾಪ್ ಗೆ ಕಳುಹಿಸಿ, ತಕ್ಷಣ ಡಿಲೀಟ್ ಮಾಡಿದ್ದರು. 16ರಂದು ವಾಟ್ಸ್‌ಆಯಪ್ ಕರೆ ಮಾಡಿ, 2 ಕೋಟಿ ರೂ. ನೀಡದಿದ್ದರೆ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ತಿಳಿಸಿದ್ದರು. 17ರಂದು ಕೋರಮಂಗಲದ ಕಾಫಿ ಬಾರ್ ಬಳಿ ದೂರದಾರನನ್ನು ಭೇಟಿ ಮಾಡಿದ ಆರೋಪಿಗಳು, 2 ಕೋಟಿ ರೂ. ಬದಲಿಗೆ 40 ಲಕ್ಷ ರೂ. ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಆಮಿಷವೊಡ್ಡಿದ್ದರು.
ಇದರಿಙದ ನೊಂದ ನಿವೃತ್ತ ಇಂಜಿನಿಯರ್, ಕೋರಮಂಗಲ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಕೆಲ ಸಾಕ್ಷ್ಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.