ದಾವಣಗೆರೆ: ದಾವಣಗೆರೆ ಡಿಸಿಆರ್‌ಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೆಕ್ಕೆಜೋಳ ಬೆಳೆ ಮಾರಾಟ ಮಾಡಿದ ರೈತರು, ವರ್ತಕರಿಗೆ ಹಣ ನೀಡದೇ ಮೋಸ ಮಾಡಿದ್ದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳಿಂದ 2.68 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ ಪಿ ಸಿ.ಬಿ.ರಿಷ್ಯಂತ್, ಮಕ್ಕೆಜೋಳ ಮಾರಾಟ ಮಾಡಿದ 96 ರೈತರು ಹಾಗೂ 29 ವರ್ತಕರಿಗೆ 2.68 ಕೋಟಿ ವಂಚಿಸಿರುವುದಕ್ಕೆ ಸಂಬಂಧಿಸುದಂತೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಬಂಧಿಸಿದಂತೆ ಆರು ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಇದೀಗ ಈ ಪ್ರಕರಣಗಳ ತನಿಖೆಗೆ ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ 13 ಜನರ ತಂಡ ರಚಿಸಿದ್ದರು. 96 ರೈತರಿಗೆ 1.51 ಕೋಟಿ , 29 ವರ್ತಕರಿಗೆ 1.17 ಕೋಟಿ ಸೇರಿ ಒಟ್ಟು 2.68 ಕೋಟಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿಗಳಾದ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ(38), ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ ಚೇತನ್(24), ದಾವಣಗೆರೆಯ ಸರಸ್ವತಿ ನಗರದ ಮಹೇಶ್ವರಯ್ಯ (35), ಹರಿಹರ ತಾಲ್ಲೂಕಿನ ಸಾಲಕಟ್ಟೆಯ ವಾಗೀಶ್(49), ಅದೇ ಗ್ರಾಮದ ಚಂದ್ರು(40) ಹಾಗೂ ದಾವಣಗೆರೆಯ ಪಿ.ಬಿ. ರಸ್ತೆಯ ನಿವಾಸಿಯಾದ ಕೆನರಾ ಬ್ಯಾಂಕ್ ನೌಕರ ಶಿವಕುಮಾರ್(59) ಆರೋಪಿಗಳಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಎಪಿಎಂಸಿ ಯಾರ್ಡ್‌ನಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗುಡಿಗುಡಾಳು ಗ್ರಾಮದ ಶಿವಲಿಂಗಯ್ಯ ಮಾಲೀಕತ್ವದ ಕೆ.ಸಿ.ಟ್ರೇಡರ್ಸ್ ಹಾಗೂ ಜಿ.ಎಂ.ಸಿ ಗ್ರೂಪ್ಸ್‌ಗೆ ರೈತರು ಹಾಗೂ ವರ್ತಕರು ಮೆಕ್ಕೆಜೋಳವನ್ನು ಮಾರಾಟ ಮಾಡಿದ್ದರು. ಆರೋಪಿಗಳು ಬ್ಯಾಂಕ್‌ನಲ್ಲಿ ಮೃತಪಟ್ಟವರ ಹೆಸರಿನಲ್ಲಿ ಖಾತೆ ತೆರೆದು, ಹಣ ಪಾವತಿಸಿರುವಂತೆ ದಾಖಲೆಯಲ್ಲಿ ಸೃಷ್ಠಿಸಿದ್ದರು. ವಿವಿಧ ರೈತರು ನೀಡಿದ ದೂರಿ ಆಧಾರ ದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.



