ದಾವಣಗೆರೆ : ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಎಲ್ಲರನ್ನೂ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕೊರೊನಾ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆರಂಭದ ದಿನಗಳಲ್ಲಿ ಬಹಳ ಆತಂಕ ಉಂಟಾಗಿತ್ತು. ಹಾಗೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ದಾವಣಗೆರೆಯೂ ಒಂದಾಗಿತ್ತು. ನಿಯಂತ್ರಣಕ್ಕೆ ತರಲು ಸಾಧ್ಯವೇ ಎಂಬಂತಾಗಿತ್ತು. ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ಎಲ್ಲಾ ಇಲಾಖಾಧಿಕಾರಿಗಳು, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದುದರ ಪರಿಣಾಮವಾಗಿ ಇಂದು ಜಿಲ್ಲೆಯಲ್ಲಿ ಕೇವಲ 241 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಹಾಗೂ ಮರಣ ಪ್ರಮಾಣವು ಗಣನೀಯವಾಗಿ ತಗ್ಗಿದೆ. ಪಾಸಿಟಿವಿಟಿ ಪ್ರಮಾಣ ಹಾಗೂ ಸಾವಿನ ಪ್ರಮಾಣ ಶೇ.1 ರಷ್ಟು ಇದ್ದು, ಸಂಘಟಿತ ಕಾರ್ಯ ಫಲ ನೀಡಿದೆ ಎಂದರು.
ಈಗಾಗಲೇ ಕೊರೊನಾ ಎರಡನೇ ಅಲೆಯ ಬಗೆಗೆ ಮಾತುಗಳು ಕೇಳಿ ಬರುತ್ತಿದ್ದು, ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಐಇಸಿ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳಲು ವಿವಿಧ ಇಲಾಖೆಗಳು ಹೆಚ್ಚು ಹೆಚ್ಚು ಪ್ರಚಾರ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಈಗಾಗಲೇ ಕೊರೊನಾ ಚೇತರಿಕೆ ಪ್ರಮಾಣ ಶೇ.98 ರಷ್ಟಿದೆಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 1,62,614 ಗಂಟಲು ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಿದ್ದು, 16,095 ಪಾಸಿಟಿವ್ ಬಂದಿರುತ್ತದೆ. 1,48,519 ನೆಗೆಟಿವ್ ಬಂದಿರುತ್ತದೆ. 2,145 ಗಂಟಲು ದ್ರವದ ಮಾದರಿಗಳ ಫಲಿತಾಂಶ ಬಾಕಿ ಇದೆ. 21,093 ಜನರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಸದ್ಯ 241 ಸಕ್ರಿಯ ಪ್ರಕರಣಗಳು ಇದ್ದು, ಪಾಸಿಟಿವಿಟಿ ದರ ಶೇ.1 ಇದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 263 ಮರಣ ಸಂಭವಿಸಿದ್ದು, ಇವುಗಳ ಪೈಕಿ 21 ವ್ಯಕ್ತಿಗಳು ಹೊರ ಜಿಲ್ಲೆಯವರಾಗಿರುತ್ತಾರೆ. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ 20 ಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದಿರದ ಕಾರಣ ಕಂಟೈನ್‍ಮೆಂಟ್ ವಲಯಗಳು ಇರುವುದಿಲ್ಲ. ಜಿಲ್ಲಾ ಚಿಗಟೇರಿ ಆಸ್ಪತ್ರೆ, ಎಸ್‍ಎಸ್ ಆಸ್ಪತ್ರೆ, ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಪ್ರಯೋಗ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 1100 ರಷ್ಟು ಗಂಟಲುದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಅಕ್ಟೋಬರ್ ತಿಂಗಳಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ನಮ್ಮ ತಂಡ ಕೋವಿಡ್ ನಿಯಂತ್ರಣದಲ್ಲಿ ತಮ್ಮ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.ಎಸ್‍ಪಿ ಹನುಮಂತರಾಯ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ ಡಾ.ನಾಗರಾಜ್, ಸಿ.ಜಿ.ಆಸ್ಪತ್ರೆ ಅಧೀಕ್ಷಕ ಡಾ.ಜಯಪ್ರಕಾಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.