ಚಿತ್ರದುರ್ಗ: ಮೂರು ತಿಂಗಳ ಹಿಂದೆ ಕೋಟೆ ನಾಡು ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ವಿಷಪೂರಿತ ಆಹಾರ ಸೇವಿಸಿ ಸಾವನ್ನಪಿದ ರಹಸ್ಯ ಬಯಲಾಗಿದೆ.
ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಘಟನೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪೋಷಕರು ಮಕ್ಕಳ ಮೇಲಿನ ಪ್ರೀತಿಯಲ್ಲಿ ತಾರತಮ್ಯ ಮಾಡಿದ್ದಕ್ಕೆ ಪುತ್ರಿಯೇ ವಿಷವಿಟ್ಟು ಪೋಷಕರನ್ನು ಕೊಲೆ ಮಾಡಿರುವ ತನಿಖೆಯಿಂದ ಗೊತ್ತಾಗಿದೆ. ಘಟನೆ ನಡೆದು ಮೂರು ತಿಂಗಳ ನಂತರ ಕೊಲೆಯ ರಹಸ್ಯ ಬಯಲಾಗಿದೆ.
ಘಟನೆ ನಡೆದ ನಂತೆ ಅನುಮಾನಗೊಂಡ ಪೊಲೀಸರು 17 ವರ್ಷದ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಇದೀಗ ವಿಚಾರಣೆ ನಡೆಸಿದಾಗ ಮುದ್ದೆಯಲ್ಲಿ ಕೀಟನಾಶಕ ಬೆರಸಿರುವುದು ಗೊತ್ತಾಗಿದೆ. ಘಟನೆಯಲ್ಲಿ ತಂದೆ-ತಾಯಿ, ಅಜ್ಜಿ ಹಾಗೂ ಸಹೋದರಿ ಸಾವನ್ನಪ್ಪಿದ್ದರು.
ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದ ಜುಲೈ 12ರಂದು ಘಟನೆ ನಡೆದಿತ್ತು. ಬಾಲಕಿಯ ತಂದೆ ತಿಪ್ಪಾನಾಯ್ಕ (45), ತಾಯಿ ಸುಧಾಬಾಯಿ (40), ಅಜ್ಜಿ ಗುಂಡಿಬಾಯಿ (80) ಹಾಗೂ ಸಹೋದರಿ ರಮ್ಯಾ (16) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಹುಲ್ (19) ಚಿಕಿತ್ಸೆಯ ಬಳಿಕ ಚೇರಿಸಿಕೊಂಡಿದ್ದ. ಕೊಲೆ ಆರೋಪ ಎದುರಿಸುತ್ತಿರುವ ಬಾಲಕಿ ಮುದ್ದೆ ಊಟ ಮಾಡಿರಲಿಲ್ಲ .
ವಿಚಾರಣೆ ವೇಳೆ ಕುಟುಂಬದ ಸದಸ್ಯರು ಸೇವಿಸಿದ್ದ ಮುದ್ದೆ, ಅನ್ನ–ಸಾರು, ಇದಕ್ಕೆ ಬಳಕೆ ಮಾಡಿದ ಪದಾರ್ಥ ಹಾಗೂ ಪಾತ್ರೆಗಳನ್ನು ದಾವಣಗೆರೆಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿರುವ ಸಂಗತಿ ಪ್ರಯೋಗಾಲಯದ ವರದಿಯಿಂದ ಗೊತ್ತಾಯಿತು. ವಿಷ ಬೆರೆಸಿ ಕೊಲೆ ಮಾಡಿದ ಆಯಾಮದಿಂದ ತನಿಖೆ ಮಾಡಿದಾಗ ಈ ಘಟನೆ ಗೊತ್ತಾಗಿದೆ.
ದಂಪತಿಯ ಮೂವರು ಮಕ್ಕಳಲ್ಲಿ ಬಾಲಕಿ ಎರಡನೇಯವಳಾಗಿದ್ದರು. 13 ವರ್ಷದವರೆಗೂ ಹೊಳಲ್ಕೆರೆ ತಾಲ್ಲೂಕಿನ ಐನಳ್ಳಿಯ ಅಜ್ಜಿಯ ಮನೆಯಲ್ಲಿ ಬೆಳೆದಿದ್ದಳು. 8ನೇ ತರಗತಿ ವ್ಯಾಸಂಗಕ್ಕೆ ಇಸಾಮುದ್ರಕ್ಕೆ ಬಂದಿದ್ದರಳು, ಶಾಲೆ ಬಿಟ್ಟು ಕೂಲಿ ಕೆಲಸ ಹೋಗುತ್ತಿದ್ದಳು.



