ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮಕ್ಕೆ ನೂತನ ಅಧ್ಯಕ್ಷರಾಗಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ ಆಯ್ಕೆ ಮಾಡಲಾಗಿದೆ.
ಮುರುಘಾ ಶರಣರ ವಜಾ ನಂತರ ಆಯ್ಕೆ
ಈ ಹಿಂದೆ ಯೋಗಗುರು ತಿರುಕ ರಾಘವೇಂದ್ರ ಶ್ರೀಗಳು, ಶ್ರೀ ಸೂರದಾಸ್ ಜೀ, ಮುರುಘಾ ಮಠದ ಶಿವಮೂರ್ತಿ ಶರಣರು ಸೇವಾ ಶ್ರಮದ ಅಧ್ಯಕ್ಷರಾಗಿದ್ದರು. ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ನಂತರ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ನಂತರ ಮುರುಘಾಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಕಾರ್ಯದರ್ಶಿಯಾಗಿದ್ದರು. ಬಸವರಾಜನ್ ಮತ್ತು ಸಮಿತಿಯಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ.
ಒಂದು ವರ್ಷದ ಕಿತ್ತಾಟಕ್ಕೆ ತೆರೆ
ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ಎಂಬ ಹೆಸರಿನಲ್ಲಿ ಗ್ರಾಮದ ಒಂದು ಗುಂಪು ಹಾಗೂ ಆಶ್ರಮದ ಟ್ರಸ್ಟಿಗಳ ನಡುವೆ ಒಂದು ವರ್ಷದಿಂದ ಕಿತ್ತಾಟ ನಡೆಯುತ್ತಲೇ ಇತ್ತು. ಗ್ರಾಮಸ್ಥರು ಜೂನ್ 4 ರಂದು ಆಶ್ರಮದ ಮುಂದೆ ಅನಾಥ ಸೇವಾಶ್ರಮ ಉಳಿಸಿ ಘೋಷ ವಾಕ್ಯದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರು. ಈಗ ದಿಢೀರ್ ಬೆಳವಣಿಗೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಆಶ್ರಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕುತೂಹಲ ಮೂಡಿಸಿದೆ.
ಅಭಿವೃದ್ದಿಗೆ ಶ್ರಮಿಸೋಣ
ಮಾದರ ಚೆನ್ನಯ್ಯ ಶ್ರೀಗಳು ಅಧಿಕಾರ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದಾರೆ. ರಾಘವೇಂದ್ರ ಶ್ರೀಗಳು, ಸೂರದಾಸ್ ಶ್ರೀ ಗಳ ಮಾರ್ಗದರ್ಶನದಲ್ಲಿ ಅನಾಥ ಸೇವಾಶ್ರಮ ಮುನ್ನಡೆಸುವ ಭರವಸೆ ನೀಡಿದ್ದಾರೆ. ಶೂನ್ಯ ಅವಸ್ಥೆಯಿಂದ ನಾನು ಪೀಠಕ್ಕೆ ಬಂದವನು. ಆ ಪೀಠ ಕಟ್ಟಿದೆ ಎಂದು ಹೇಳಿದರೆ ಆ ಪೀಠ ನನ್ನದಲ್ಲ, ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ಶಾಶ್ವತವಲ್ಲ. ರಾಘವೇಂದ್ರ ಶ್ರೀ, ಸೂರದಾಸರ ಕೃಪೆ ಇರುವವರೆಗೆ ಅಭಿವೃದ್ದಿಗೆ ಶ್ರಮಿಸೋಣ ಎಂದು ಮಲ್ಲಾಡಿಹಳ್ಳಿಯಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ ಅಭಿಪ್ರಾಯಪಟ್ಟಿದ್ದಾರೆ.



