ದಾವಣಗೆರೆ: ಪ್ರತಿ ಬಾರಿ ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ವಾ..? ಎಂದು ಮಹಿಳಾ ಅಧಿಕಾರಿ ವಿರುದ್ಧ ಶಾಸಕ ಬಸವರಾಜ್ ವಿ. ಶಿವಗಂಗಾ ಸಿಡಿಮಿಡಿಗೊಂಡರು.
ನೋಟಿಸ್ ನೀಡಲು ಸೂಚನೆ
ಕೆಡಿಪಿ ಸಭೆಗೆ ಗೈರಾದ ಮಹಿಳಾ ಅಧಿಕಾರಿ ವಿರುದ್ದ ಗರಂ ಆದ ಕಾಂಗ್ರೆಸ್ ಶಾಸಕ, ಮಹಿಳಾ ಅಧಿಕಾರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಇಂದು (ಅ.15) ನಡೆದ ಕೆಡಿಪಿ ಸಭೆಗೆ ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಶ್ವೇತಾ ಗೈರಾಗಿದ್ದರು. ಅಧಿಕಾರಿ ಯಾಕೆ ಸಭೆಗೆ ಬಂದಿಲ್ಲ ಎಂದು ಶಾಸಕರು ಪ್ರಶ್ನೆ ಮಾಡಿದಾಗ, ಮೇಡಂ ಗರ್ಭಿಣಿಯಾಗಿರುವ ಕಾರಣ ಸಭೆಗೆ ಬಂದಿಲ್ಲ ಎಂದು ಸಹಾಯಕ ವಲಯ ಅರಣ್ಯ ಅಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಸಿಡಿಮಿಡಿಗೊಂಡ ಶಾಸಕರು ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿ, ನಾಳೆ ನೋಟಿಸ್ ನೀಡಿದ ಒಂದು ಕಾಪಿ ತಲುಪಬೇಕೆಂದು ಸೂಚಿಸಿದರು.
ಗರ್ಭಿಣಿಯಾಗಿದ್ರೆ ರಜೆ ತೆಗೆದುಕೊಳ್ಳಲಿ
ಗರ್ಭಿಣಿಯಾಗಿದ್ರೆ ಸರ್ಕಾರದಿಂದ ಸಿಗುವ ರಜೆಗಳನ್ನು ತೆಗೆದುಕೊಳ್ಳಲಿ. ಕೆಲಸದಲ್ಲಿರುವ ಸಂದರ್ಭದಲ್ಲಿ ಸಭೆಗೆ ಹಾಜರಾಗಬೇಕು. ಮಾಮೂಲಿ ತೆಗೆದುಕೊಳ್ಳಬೇಕಾದ್ರೆ ಡ್ಯೂಟಿ ಬೇಕಾಗುತ್ತದೆ. ಕೆಡಿಪಿ ಸಭೆಗೆ ಕರೆದ್ರೆ ಪ್ರೆಗ್ನೆಂಟ್ ಅಂತಾರೆ, ನಾಚಿಕೆ ಆಗಲ್ವಾ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಸಂಬಳ, ಗಿಂಬಳ ಬೇಕು ಡ್ಯೂಟಿ ಮಾಡೋಕೆ ಆಗಲ್ಲ..!
ಪ್ರೆಗ್ನೆನ್ಸಿ ರಜೆ ಇದೆ ಅಲ್ಲವಾ, ಅದನ್ನು ತಗೆದುಕೊಳ್ಳಲಿ. ಸಂಬಳ ಬೇಕು, ಗಿಂಬಳವೂ ಬೇಕು ಆದ್ರೆ ಇವರಿಗೆ ಡ್ಯೂಟಿ ಮಾಡೋಕೆ ಆಗಲ್ಲ. ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ಲವಾ ಅಂತ ಅವರನ್ನು ಕೇಳಿ? ಪ್ರತಿಬಾರಿಗೂ ಕೇಳಿದಾಗ, ಪ್ರೆಗ್ನೆಂಟ್ ಇದ್ದು, ಡಾಕ್ಟರ್ ಬಳಿಯಲ್ಲಿದ್ದೀನಿ ಎಂದು ಹೇಳುತ್ತಾರೆ. ಈ ಕುರಿತು ತಕ್ಷಣವೇ ಜಿಲ್ಲಾಡಳಿತ, ಸರ್ಕಾರ ಮತ್ತು ಸಿಸಿಎಫ್‌ಗೆ ಪತ್ರ ಬರೆಯಿರಿ. ಪತ್ರದಲ್ಲಿ ನಾನು ಹೇಳಿರುವ ಎಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು ಎಂದು ಸೂಚಿಸಿದ್ದಾರೆ.