ದಾವಣಗೆರೆ: ಅಯ್ಯೋ ನನ್ನ ಮೊಬೈಲ್ ಕಳೆದು ಹೊಯ್ತು..! ಕಳೆದು ಹೋದ ಮೊಬೈಲ್ ಪತ್ತೆ ಹೇಗೆ ಮಾಡಬೇಕು ಅಂತಾ ಚಿಂತೆ ಮಾಡ್ತಿದ್ದೀರಾ..ಇನ್ಮುಂದೆ ಈ ಚಿಂತೆ ಬಿಟ್ಟು ಬಿಡಿ…. ಕಳೆದು ಹೋದ ಮೊಬೈಲ್ ಪತ್ತೆಗೆ ಹೊಸ ವೆಬ್ ಪೋರ್ಟಲ್ ಬಂದಿದೆ. ಈ ಪೋರ್ಟಲ್ ಮೂಲಕ ಕಳವಾದ ಮೊಬೈಲ್ ಪತ್ತೆ ಮಾಡಲು ಸಾಧ್ಯವಿದೆ.
ಕಳೆದು ಹೋಗಿರುವ ಮೊಬೈಲ್ ಪತ್ತೆಗಾಗಿ ಸರ್ಕಾರ ಸಿಇಐಆರ್ (ಸೆಂಟ್ರಲ್ ಇಕ್ಯುಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ ಸಿದ್ಧಪಡಿಸಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ನೂತನ ವ್ಯವಸ್ಥೆ ಜಾರಿಗೆ ತಂದಿದೆ. ಈ ಪೋರ್ಟಲ್‌ಗೆ ಭೇಟಿ ನೀಡಿ ವ್ಯಕ್ತಿಯು ಕಳೆದುಕೊಂಡ ಮೊಬೈಲ್ ಮಾಹಿತಿ ಹಾಗೂ ಸ್ವ-ವಿವರವನ್ನು ದಾಖಲಿಸಿದರೆ ಸಾಕು, 24 ಗಂಟೆಯಲ್ಲಿಯೇ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಮೊಬೈಲ್ ಕದ್ದ ಕಳ್ಳ ಆ ಫೋನನ್ನು ಮತ್ತೆ ಬಳಸಲು ಆರಂಭಿಸಿದರೆ ಸಾಕು ಮೊಬೈಲ್ ಪತ್ತೆ ಹಚ್ಚಬಹುದು.
ಮೊಬೈಲ್ ಕಳೆದು ಹೋದವರು ಸಿಇಐಆರ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿ ದೂರಿನ ಪ್ರತಿ ಪಡೆದಿರಬೇಕು. ದೂರಿನ ಪ್ರತಿ ಪಡೆಯದಿದ್ದರೆ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ ಇ-ಲಾಸ್ಟ್) ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಇ-ಲಾಸ್ಟ್ ಕಾಲಮ್‌ನಲ್ಲಿ ಮಾಹಿತಿ ನೀಡಿದರೆ ಈ ದೂರಿನ ಪ್ರತಿ ಸಿಗುತ್ತದೆ. ಅದನ್ನು ಪಡೆದು ಮೊಬೈಲ್ ಖರೀದಿಸಿದ ಬಿಲ್ ಹಾಗೂ ಆಧಾರ್ ಅಥವಾ ಗುರುತಿನ ಚೀಟಿಯ ಮಾಹಿತಿ ನಮೂದಿಸಬೇಕು. ಸ್ವವಿವರವನ್ನು ದಾಖಲಿಸಬೇಕು.
ಮೊಬೈಲ್ ಕಳೆದ ತಕ್ಷಣ ನಕಲಿ ನಂಬರ್ ಪಡೆದಿರಬೇಕು. ಆ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್ ಬಿಲ್‌ನಲ್ಲಿ ಐಎಂಇ ನಂಬರ್ ಹಾಕಬೇಕು. ಎಲ್ಲಿ ಕಳೆಯಿತು ಎಂಬ ಬಗ್ಗೆ ಮಾಹಿತಿ ಕೇಳುತ್ತದೆ. ಅದನ್ನು ನೀಡಿದಾಗ ಮೊಬೈಲ್‌ಗೆ ಒಂದು ಒಟಿಪಿ ಬರುತ್ತದೆ. ಆಗ ರಿಕ್ವೆಸ್ಟ್ ಐಡಿ ಬರುತ್ತದೆ. ತಕ್ಷಣ ಮೊಬೈಲ್ ಬ್ಲಾಕ್ ಆಗುತ್ತದೆ.ಮೊಬೈಲ್ ಕದ್ದವರು ಬೇರೆ ಸಿಮ್ ಹಾಕಿದ ತಕ್ಷಣ ಸಿಇಎನ್ ಅಪರಾಧ ಠಾಣೆಗೆ ಮಾಹಿತಿ ಬರುತ್ತದೆ. ಪೊಲೀಸರ ತಕ್ಷಣ ಕಳ್ಳರನ್ನು ಹಿಡಿಯಲು ನೆರವಾಗುತ್ತದೆ.



