ದಾವಣಗೆರೆ: ಭದ್ರಾ ಜಲಾಶಯ ( bhadra dam) ಬಲದಂಡೆ ನಾಲೆ ಸೀಳಿ ನೀರು ಕೊಂಡೊಯ್ಯುವ ಕಾಮಗಾರಿ ಕೈ ಬಿಡುವಂತೆ ಜು.9ರಂದು ಬೆಳಗ್ಗೆ 11 ಗಂಟೆಗೆ ಲಕ್ಕವಳ್ಳಿಯ ಭದ್ರಾ ಡ್ಯಾಂ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ನಾಲೆ ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ನೀರು ಒಯ್ಯುವುದನ್ನು ವಿರೋಧಿಸಿ 25 ದಿನದಿಂದ ಹಂತ ಹಂತದ ಹೋರಾಟ ಯಶಸ್ವಿಯಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಸಹ ಕಾಮಗಾರಿ ನಿಲ್ಲಿಸುವಂತೆ ಮನವರಿಕೆ ಮಾಡಿ, ಕೋರಿಕೆ ಸಲ್ಲಿಸಿದ್ದೇವೆ. ಜು.9ರಂದು ಬೆಳಗ್ಗೆ 11 ಗಂಟೆಗೆ ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಸಂಬಂಧಿಸಿದ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.
ತಡೆಗೋಡೆ ಕಟ್ಟಿ, ಮಳೆಗಾಲದ ಬೆಳೆಗೆ ನೀರು ಹರಿಸಿ
ಪಕ್ಷಾತೀತವಾಗಿ ಹೋರಾಟಕ್ಕೂ ಸಿದ್ಧರಿದ್ದೇವೆ. ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ನೇತೃತ್ವದಲ್ಲೇ ನಮ್ಮ ಹೋರಾಟ ನಡೆಯಲಿದೆ. ಬಲದಂಡೆ ನಾಲೆಗೆ ತಕ್ಷಣ ತಡೆಗೋಡೆ ಕಟ್ಟಿ, ಮಳೆಗಾಲದ ಬೆಳೆಗೆ ನೀರು ಬಿಡುಗಡೆ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಅವೈಜ್ಞಾನಿಕ ಕಾಮಗಾರಿ ವಿರುದ್ಧ ಕರಪತ್ರ
ನಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಪ್ರತಿ ವರ್ಷ ಜು.10ರೊಳಗೆ ಭದ್ರಾ ನಾಲೆಗಳಿಗೆ ನೀರು ಬಿಡಬೇಕು. ಜೂ.21ರಂದು ಭದ್ರಾ ಡ್ಯಾಂಗೆ ಭೇಟಿ ನೀಡದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಕರಪತ್ರಗಳನ್ನು ಹಂಚುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಪ್ರವೀಣ ಜಾಧವ್ ಇತರರು ಇದ್ದರು.



