ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಒಳ ಹರಿವು ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ( ಜು.18) 42,165 ಕ್ಯೂಸೆಕ್ ಒಳ ಹರಿವಿದ್ದು, ನಿನ್ನೆ (ಜು.17) 34544 ಕ್ಯೂಸೆಕ್ ಇತ್ತು. ನಿನ್ನೆಗೆ ಹೋಲಿಸಿದ್ರೆ 8 ಸಾವಿರ ಕ್ಯೂಸೆಕ್ ನಷ್ಟು ಒಳಹರಿವು ಏರಿಕೆಯಾಗಿದೆ.ಒಂದೇ ದಿನ 4.5 ಅಡಿ ನೀರು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ದಿನ 835 ಕ್ಯೂಸೆಕ್ ಒಳಹರಿವು ಇತ್ತು.
ಭದ್ರಾ ಡ್ಯಾಂ ಒಳಹರಿವು ಹೆಚ್ವಳದಿಂದ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತ ಬೆಳೆಗಾರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಭರವಸೆ ಹುಟ್ಟಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗ ಭದ್ರಾ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗಿರುವುದರಿಂದ ನಾಲೆಗೆ ನೀರು ಹರಿಸುವ ಸಂಭವ ಇದೆ. ಈ ಹಿನ್ನೆಲೆ ಅಚ್ಚುಕಟ್ಟು ರೈತರು, ಭತ್ತದ ಸಸಿ ಮಡಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೋರ್ ವೆಲ್ ಇರುವವರು ಈಗಾಗಲೇ ಭತ್ತ ನಾಟಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭದ್ರಾ ನಾಲೆಯ ನೀರು ಅವಲಂಭನೆ ಇರುವವರು ಬೋರ್ ನೀರಿಗೆ ಸಸಿ ಮಡಿ ಮಾಡುತ್ತಿದ್ದಾರೆ. ಭದ್ರಾ ಡ್ಯಾಂ ಭರ್ತಿಯಾಗಿ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಸಿಗುವ ಸಂಭವ ಹೆಚ್ವಿದೆ.
ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 20 ದಿನ ಸಂಪೂರ್ಣ ತಗ್ಗಿತ್ತು. ಈಗ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿದೆ. ಮುಂದೆ ಇದೇ ರೀತಿ ಮಳೆಯಾಗಿ ಬೇಗ ಡ್ಯಾಂ ತುಂಬಲಿ ಎಂಬುದು ಭದ್ರಾ ಅಚ್ಚುಕಟ್ಟು ಭಾಗದ ರೈತರ ಅಶಯವಾಗಿದೆ.
ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು.18) ನೀರಿನ ಮಟ್ಟ 153 ಅಡಿಯಷ್ಟಿದೆ. ಒಳ ಹರಿವು 42,165 ಕ್ಯೂಸೆಕ್ ನಷ್ಟಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 33.112 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 153 ಅಡಿ
- ಒಳ ಹರಿವು :42,165 ಕ್ಯೂಸೆಕ್ (ಜು.17ರಂದು
34,544ಕ್ಯೂಸೆಕ್)
- ಹೊರ ಹರಿವು : 174 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 141.5 ಅಡಿ
- ಇದೇ ದಿನ ಕಳೆದ ವರ್ಷದ ಒಳಹರಿವು: 835 ಕ್ಯೂಸೆಕ್