ದಾವಣಗೆರೆ: ವಿಧಾನಸಭೆ ಚುನಾವಣೆ ಮತ ಎಣಿಕೆ ನಾಳೆ (ಮೇ13) ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಮತ ಎಣಿಕೆ ನಡೆಯಲಿರುವ ಶಿವಗಂಗೋತ್ರಿಯಲ್ಲಿ ಎಣಿಕೆ ಕೇಂದ್ರಗಳ ಪರಿಶೀಲನೆ ನಡೆಸಿ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಶಿವಗಂಗೋತ್ರಿಯಲ್ಲಿ ನಡೆಯಲಿದೆ. ನಾಲೆಜ್ ಬ್ಲಾಕ್‍ನ ಮೊದಲ ಮಹಡಿಯಲ್ಲಿ 103.ಜಗಳೂರು, 106. ದಾವಣಗೆರೆ ಉತ್ತರ, 108 ಮಾಯಕೊಂಡ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಸೈನ್ಸ್ ಬ್ಲಾಕ್ ಮೊದಲ ಮಹಡಿಯಲ್ಲಿ 105.ಹರಿಹರ, 107 ದಾವಣಗೆರೆ ದಕ್ಷಿಣ, ಸೋಷಿಯಲ್ ಸೈನ್ಸ್ ಬ್ಲಾಕ್ ಮೊದಲ ಮಹಡಿಯಲ್ಲಿ 109.ಚನ್ನಗಿರಿ, 110.ಹೊನ್ನಾಳಿ ಕ್ಷೇತ್ರಗಳ ಮತ ಎಣಕೆ ನಡೆಯಲಿದೆ.
14 ಟೇಬಲ್‍ಗಳಲ್ಲಿ ಎಣಿಕೆ: ಪ್ರತಿ ಕ್ಷೇತ್ರದಲ್ಲಿ 14 ಎಣಿಕೆ ಟೇಬಲ್‍ಗಳ ಮೂಲಕ ಎಣಿಕೆ ನಡೆಯಲಿದ್ದು ಮೈಕ್ರೋ ಅಬ್ಸರ್‍ವರ್, ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕರು ಇರುವರು. ಬೆಳಗ್ಗೆ 8 ಗಂಟೆಗೆ ಬ್ಯಾಲೆಟ್ ಎಣಿಕೆ ನಡೆಯಲಿದೆ. 8.30 ಕ್ಕೆ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 7 ಕ್ಷೇತ್ರಗಳಿಂದ 98 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು 196 ಎಣಿಕೆ ಸಿಬ್ಬಂದಿ, 105 ಮೈಕ್ರೋ ಅಬ್ಸರ್‍ವರ್‍ಗಳಿರುವರು. ಅಂಚೆ ಮತ ಎಣಿಕೆಗೆ 24 ಟೇಬಲ್‍ಗಳಿಗೆ 72 ಸಿಬ್ಬಂದಿ, 24 ಮೈಕ್ರೋ ಅಬ್ಸರ್‍ವರ್, ಸೇವಾ ಮತದಾರರ ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ ಒಂದು ಟೇಬಲ್ ಇರಲಿದ್ದು ಒಟ್ಟು 28 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಎಣಿಕೆಗೆ ಮೀಸಲಿರಿಸಲಾಗಿದೆ ಎಂದರು.
19 ರೌಂಡ್ಸ್ ವರೆಗೆ ಎಣಿಕೆ: ಮತ ಎಣಿಕೆಯು ಕನಿಷ್ಠ 15 ರಿಂದ ಗರಿಷ್ಠ 19 ಸುತ್ತಿನವರೆಗೆ ಎಣಿಕೆ ನಡೆಯಲಿದೆ. ಇದರಲ್ಲಿ ಜಗಳೂರು 262 ಮತಗಟ್ಟೆಗಳು 19 ಸುತ್ತು, ಹರಿಹರ 228 ಮತಗಟ್ಟೆಗಳಿದ್ದು 16 ಸುತ್ತುಗಳು, ದಾವಣಗೆರೆ ಉತ್ತರ 242 ಮತಗಟ್ಟೆ 17 ಸುತ್ತು, ದಾವಣಗೆರೆ ದಕ್ಷಿಣ 214 ಮತಗಟ್ಟೆ 15 ಸುತ್ತು, ಮಾಯಕೊಂಡ 240 ಮತಗಟ್ಟೆ 17 ಸುತ್ತು, ಚನ್ನಗಿರಿ 254 ಮತಗಟ್ಟೆ 18 ಸುತ್ತು, ಹೊನ್ನಾಳಿ 245 ಮತಗಟ್ಟೆಗಳಿಗೆ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದರು.
ಕ್ಷೇತ್ರವಾರು ಮತದಾರರು, ಮತದಾನ ವಿವರ :ಜಿಲ್ಲೆಯಲ್ಲಿ 721964 ಪುರುಷ, 720004 ಮಹಿಳೆಯರು, 118 ಇತರೆ ಸೇರಿ 1442086 ಮತದಾರರಲ್ಲಿ 573295 ಪುರುಷ, 553179 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 1126497 ಜನರು ಮತದಾನ ಮಾಡಿ ಶೇ 78.12 ರಷ್ಟು ಮತದಾನವಾಗಿದೆ.
ಜಗಳೂರು 97690 ಪುರುಷ, 95257 ಮಹಿಳೆ, ಇತರೆ 11 ಸೇರಿ 192958 ರಲ್ಲಿ 79439 ಪುರುಷ, 75656 ಮಹಿಳೆ ಸೇರಿ 155095 ಜನರು ಮತದಾನ ಮಾಡಿ ಶೇ 80.38, ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ ಸೇರಿ 207517 ಮತದಾರರಲ್ಲಿ 85247 ಪುರುಷ, 81689 ಮಹಿಳೆ, 9 ಇತರೆ ಸೇರಿ 166945 ಮತ ಚಲಾವಣೆಯಾಗಿ ಶೇ 80.45, ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ ಸೇರಿ 241232 ಮತದಾರರಲ್ಲಿ 82558 ಪುರುಷ, 82933 ಮಹಿಳೆ, 7 ಇತರೆ ಸೇರಿ 165498 ಮತದಾನ ಮಾಡಿ ಶೇ 68.61, ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಸೇರಿ 210668 ಮತದಾರರಲ್ಲಿ 73556 ಪುರುಷ, 71975 ಮಹಿಳೆ, 3 ಇತರೆ ಸೇರಿ 145534 ಮತದಾನವಾಗಿ ಶೇ 69.08, ಮಾಯಕೊಂಡ 96491 ಪುರುಷ, 94803 ಮಹಿಳೆ, 6 ಇತರೆ ಸೇರಿ 191300 ಒಟ್ಟು ಮತದಾರರಲ್ಲಿ 82623 ಪುರುಷ, 78603 ಮಹಿಳೆ, 2 ಇತರೆ ಸೇರಿ ಒಟ್ಟು 161228 ಮತ ಚಲಾವಣೆಯಾಗಿ ಶೇ 84.28, ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ ಸೇರಿ 199468 ರಲ್ಲಿ 84576 ಪುರುಷ, 80123 ಮಹಿಳೆ, 1 ಇತರೆ ಸೇರಿ 164700 ಮತ ಚಲಾಯಿಸಿದ್ದು ಶೇ 82.57, ಹೊನ್ನಾಳಿ ಕ್ಷೇತ್ರ 99735 ಪುರುಷ, 99204 ಮಹಿಳೆ, 4 ಇತರೆ ಸೇರಿ 198943 ಮತದಾರರಲ್ಲಿ 85296 ಪುರುಷ, 82200 ಮಹಿಳೆಯರು ಹಾಗೂ ಇತರೆ 1 ಸೇರಿ ಒಟ್ಟು 167497 ಮತದಾರರು ಮತ ಚಲಾಯಿಸಿದ್ದು ಶೇ 84.19 ರಷ್ಟು ಮತದಾನವಾಗಿದೆ.
ಅಂಚೆ ಮತಪತ್ರದ ವಿವರ :ಅಂಚೆ ಮತಪತ್ರದಲ್ಲಿ ಮತದಾನ ಮಾಡಿದವರಲ್ಲಿ 80 ವರ್ಷ ಮೇಲ್ಪಟ್ಟವರು 1784, ವಿಶೇಷಚೇತನರು 495, ಅಗತ್ಯ ಸೇವೆಯಲ್ಲಿರುವವರು 268, ಸೇವಾ ಮತದಾರರು 467 ರಲ್ಲಿ ಮೇ 11 ರ ವರೆಗೆ 31 ಮತ್ತು 10751 ಚುನಾವಣಾ ಸಿಬ್ಬಂದಿಗಳಲ್ಲಿ 7050 ಮತ ಚಲಾಯಿಸಿರುವರು.
ಪೊಲೀಸ್ ಬಿಗಿ ಬಂದೋಬಸ್ತ್: ಮತ ಎಣಿಕೆ ನಡೆಯುವ ಶಿವಗಂಗೋತ್ರಿಯಲ್ಲಿ ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ಮತ ಎಣಿಕೆ ಕೇಂದ್ರದ ಇವಿಎಂ ಭದ್ರತಾ ಕೊಠಡಿ, ಎಣಿಕೆ ಕೊಠಡಿ ಪ್ರವೇಶದ್ವಾರಗಳಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಆವರಣದಲ್ಲಿ ಕೆಎಸ್‍ಆರ್‍ಪಿ ಹಾಗೂ ಹೊರಗಡೆ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದು 300 ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿಂದ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತ್ತು ದಾವಣಗೆರೆ ಸಂತೇಬೆನ್ನೂರು, ಚನ್ನಗಿರಿ ಮಾರ್ಗದಲ್ಲಿ ಸಾಗುವವರು ತೋಳಹುಣಸೆ ವಿಶ್ವವಿದ್ಯಾನಿಲಯದ ಮುಂದಿನ ಮಾರ್ಗದಲ್ಲಿ ಸಂಚಾರಕ್ಕೆ ನಿಬರ್ಂಧ ಇರುವುದರಿಂದ ಬದಲಿ ಮಾರ್ಗದಲ್ಲಿ ತೆರಳಲು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಈಗಾಗಲೇ ಜಿಲ್ಲಾ ದಂಡಾಧಿಕಾರಿಗಳು 144 ಸೇಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಜಿಲ್ಲೆಯ ಎಲ್ಲಾ ಕಡೆ ನಿಗಾವಹಿಸಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ. ಚುನಾವಣಾ ಫಲಿತಾಂಶಗಳ ಪ್ರತಿ ಸುತ್ತಿನ ಮಾಹಿತಿ ನೀಡಲು ಧ್ವನಿವರ್ಧಕದ ಮೂಲಕ ಎಣಿಕೆ ಮಾಹಿತಿ ಆಗಿಂದಾಗ್ಗೆ ನೀಡಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್.ಕೆ ವಿವರಿಸಿದರು.