ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಕ್ಕೆ (arecanut rate) ಈಗ ಬಂಪರ್ ಬೆಲೆ ಬಂದಿದ್ದು, ಕಳೆದ 20 ದಿನದಿಂದ ಸತತ ಏರಿಕೆ ಕಾಣುತ್ತಿದೆ. ಇಂದು ಒಂದೇ ದಿನ 1,100 ರೂ. ಏರಿಕೆಯಾಗಿದೆ. ಸಾಕಷ್ಟು ಏರಿಳಿತ ಬಳಿಕ ಈಗ 53 ಸಾವಿರ ಗಡಿ ಮುಟ್ಟಿದೆ. ಇಂದು (ಏ.22) ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 53,100ರೂ.ಗಳಿದ್ದು, ಕನಿಷ್ಠ ಬೆಲೆ 48,599 ರೂ.ಗಳಾಗಿದೆ. ಹಿಂದಿನ ದಿನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ 51,900 ರೂಪಾಯಿ ಇತ್ತು.
ಏಪ್ರಿಲ್ ತಿಂಗಳ ಆರಂಭದಿಂದಲೂ ದರ ಸತತ ಏರಿಕೆ ಕಾಣುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಇನ್ನೊಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಅಡಿಕೆ ಆಮದು ಸಂಪೂರ್ಣ ಸ್ಥಗಿತಗೊಂಡಿರುವುದು, ಚೆಕ್ ಪೋಸ್ಟ್ ಮೂಲಕ 50 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿರ್ಬಂದದಿಂದ ಚಿಲ್ಲರೆ ಮಾರಾಟ ಸ್ಥಗಿತಗೊಂಡಿದೆ ಮತ್ತು ಚಳಿಗಾಲದಲ್ಲಿ ಪಾನ್ ಮಸಾಲ ಹಾಳಾಗುತ್ತದೆ ಎಂಬ ಕಾರಣಕ್ಕೆ ಪಾನ್ ಮಸಾಲ ಕಂಪನಿಗಳು ಉತ್ಪಾದನೆ ನಿಲ್ಲಿಸಿದ್ದು, ಈಗ ಬೇಸಿಗೆಯಲ್ಲಿ ಉತ್ಪಾದನೆ ಹೆಚ್ವಿಸಿದ್ದರಿಂದ ಅಡಿಕೆ ದರ ಏರಿಕೆಯಾಗಿದೆ. ಈ ಬೆಳವಣಿಗೆಯಿಂದ ಅಡಿಕೆ ದರ ಏಕಾಏಕಿ ಏರಿಕೆಗೆ ಮುಖ್ಯ ಕಾರಣವಾಗಿದೆ. ಮುಂದಿನ ದಿನದಲ್ಲಿ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಇನ್ನೂ ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಅಸಲಿ ಬೇಸಿಗೆ ಈಗ ಶುರುವಾಗಿದೆ. ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಿದ್ದು, ಅಡಿಕೆ ಬೆಳೆ ಒಣಗುತ್ತಿವೆ. ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎಂದು ರೈತರು ಹರಸಾಹಸ ಪಡುತ್ತಿದ್ದಾರೆ. ಬಿಸಿಲಿನ ತಾಪಮಾನಕ್ಕೆ ಹರಳು ಉದುರುತ್ತಿವೆ. ಬೋರ್ ವೆಲ್ ಗಳು ಬತ್ತಿದ್ದು ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ.
2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು. ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 53 ಸಾವಿರಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಏಪ್ರಿಲ್ 22ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 48,599 ರೂ., ಗರಿಷ್ಠ ಬೆಲೆ 53,100 ಹಾಗೂ ಸರಾಸರಿ ಬೆಲೆ 51,812 ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಗರಿಷ್ಠ 33,029/ರೂ. ಇದೆ.