Connect with us

Dvgsuddi Kannada | online news portal | Kannada news online

ತೊಗರಿ ಬೆಳೆ ಕ್ಷೇತ್ರೋತ್ಸವ; ಕೃಷಿಯಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡದಿದ್ದರೆ, ಕರಾಳ ದಿನ ಗ್ಯಾರಂಟಿ: ರಾಜಶೇಖರಪ್ಪ

ಕೃಷಿ ಖುಷಿ

ತೊಗರಿ ಬೆಳೆ ಕ್ಷೇತ್ರೋತ್ಸವ; ಕೃಷಿಯಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡದಿದ್ದರೆ, ಕರಾಳ ದಿನ ಗ್ಯಾರಂಟಿ: ರಾಜಶೇಖರಪ್ಪ

ದಾವಣಗೆರೆ: ಕೃಷಿಯಲ್ಲಿ ಯಥೇಚ್ಛವಾಗಿ ಬಳಸುತ್ತಿರುವ ರಾಸಾಯನಿಕಗಳನ್ನು ಕಡಿಮೆ ಮಾಡದೇ ಇದ್ದರೆ ಪ್ರತಿಯೊಬ್ಬರೂ ಕರಾಳದಿನಗಳನ್ನು ಅನುಭವಿಸಬೇಕಾಗುತ್ತದೆ. ಎಷ್ಟೇ ಉತ್ಪಾದನೆ ಮಾಡಿದರೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರಪ್ಪ ಎಸ್.ಬಿ.  ಅಭಿಪ್ರಾಯಪಟ್ಟರು.

ಕೃಷಿ ಇಲಾಖೆ ದಾವಣಗೆರೆ ವತಿಯಿಂದ ಎಲೆಬೇತೂರು ಗ್ರಾಮದ ಪ್ರಗತಿಪರ ರೈತರಾದ ಹೆಚ್.ಸಿ. ಲೋಕೇಶ್ ಬಿನ್ ಚನ್ನಬಸಪ್ಪ ಇವರ ಜಮೀನಿನಲ್ಲಿ ಇಂದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಏರ್ಪಡಿಸಲಾಗಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗಪ್ಪ ಗೌಡ ಮಾತನಾಡಿ, ಪ್ರತಿಯೊಬ್ಬ ರೈತರು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕತೆಗಳನ್ನು ಅಳವಡಿಸಿ ಹೆಚ್ಚಿನ ಉತ್ಪಾದನೆ ಮಾಡಬೇಕು. ಆ ಮೂಲಕ ಇತರೆ ರೈತರಿಗೆ ಮಾದರಿಯಾಗಬೇಕು.

ನಮ್ಮ ಗ್ರಾಮದಲ್ಲಿ ರೈತರು ರಾಗಿ, ಜೋಳ, ತೊಗರಿ ಮತ್ತು ವಾಣಿಜ್ಯ ಬೆಳೆಗಳನ್ನು ಪ್ರೀತಿಯಿಂದ ಶ್ರದ್ಧೆ ವಹಿಸಿ ವ್ಯವಸಾಯ ಮಾಡುತ್ತಾರೆ. ರೈತರಾದ ಹೆಚ್.ಸಿ. ಲೋಕೇಶ್‍ರವರು ಎರಡು ವರ್ಷಗಳ ಹಿಂದೆ ಉತ್ತಮವಾಗಿ ಮೆಕ್ಕೇಜೋಳ ಬೆಳೆದಿದ್ದರು. ಅಂದು ಅವರ ಜಮೀನಿನಲ್ಲಿ ಕ್ಷೇತ್ರೋತ್ಸವ ನಡೆಸಲಾಗಿತ್ತು. ಇಂದು ಸಹ “ಲತಿಕ” ಎಂಬ ತಳಿಯ ತೊಗರಿ ಬೆಳೆಯನ್ನು ಇಲಾಖೆಯ ಮಾರ್ಗದರ್ಶನದಲ್ಲಿ ಉತ್ತಮವಾಗಿ ಇವರು ಬೆಳೆದಿದ್ದು, ಇಂದು ಸಹ ಇವರ ಜಮೀನಿನಲ್ಲಿ ಕ್ಷೇತ್ರೋತ್ಸವ ನಡೆಯುತ್ತಿದೆ. ಉತ್ತಮ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದು ಇತರರೂ ಹೀಗೆ ಮಾದರಿಯಾಗುವಂತೆ ಕೃಷಿ ಮಾಡಬೇಕೆಂದರು.

ಉಪ ಕೃಷಿ ನಿರ್ದೇಶಕರಾದ ಶಿವಕುಮಾರ್‍ರವರು ಮಾತನಾಡಿ, ಪ್ರತಿಯೊಬ್ಬ ರೈತರು ಸಹಜ ಕೃಷಿ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ಧತಿಗಳು, ಸಮಗ್ರ ಕೀಟ ನಿರ್ವಹಣಾ ಕಾರ್ಯಕ್ರಮಗಳನ್ನು, ಸಮಗ್ರ ಪೋಷಕಾಂಶ ನಿರ್ವಹಣೆಯಂಥ ಎಲ್ಲಾ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿದ್ದೇ ಆದಲ್ಲಿ ಕೃಷಿಯಲ್ಲಿ ನಷ್ಟ ಖಂಡಿತವಾಗಿಯೂ ಇರುವುದಿಲ್ಲ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕರಾದ ರೇವಣಸಿದ್ದನಗೌಡ ಹೆಚ್.ಕೆ. ಮಾತನಾಡಿ, ಮಣ್ಣು ಆರೋಗ್ಯ ಅಭಿಯಾನ, ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆಗೆ ಸಂಬಂಧಿಸಿದ ಮಾಹಿತಿ, ಇಂದಿನ ಆಹಾರ ಪದ್ಧತಿಗಳು, ಸಾವಯವ ಕೃಷಿ ಸೇರಿದಂತೆ ಇಲಾಖೆಯಲ್ಲಿ ಇರುವ ಎಲ್ಲಾ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಬೇತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್. ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಕಾಡಾ ಸದಸ್ಯ ಹೆಚ್. ಬಸವರಾಜಪ್ಪ, ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿ ಬಿ. ದುರುಗಪ್ಪ, ಆತ್ಮ ಸಿಬ್ಬಂದಿ ವೆಂಕಟೇಶ್, ಅನುವುಗಾರರಾದ ರಾಜಪ್ಪ, ಪ್ರಭಾಕರ್ ಹಾಗೂ ಬೇತೂರು ಗ್ರಾಮದ ರೈತರು ಭಾಗವಹಿಸಿದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕೃಷಿ ಖುಷಿ

To Top
(adsbygoogle = window.adsbygoogle || []).push({});