ಬೆಂಗಳೂರು: ರಾಜ್ಯದಾದ್ಯಂತ ಖ್ಯಾತಿ ಗಳಿಸಿದ ಗರಿ ಗರಿಯಾದ ದಾವಣಗೆರೆ ಬೆಣ್ಣೆ ದೋಸೆಗೆ (Davanagere Benne Dose) ಜಿಐ ಟ್ಯಾಗ್ (ಭೌಗೋಳಿಕ ಗುರುತು) ನೀಡಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ.
ದಾವಣಗೆರೆ ಬೆಣ್ಣೆ ದೋಸೆ ಯಾವುದೇ ಒಂದು ಸೀಮಿತ ಪ್ರದೇಶಕ್ಕೆ ನಿರ್ದಿಷ್ಟವಾಗಿಲ್ಲದ ಕಾರಣ ಜಿಐ ಟ್ಯಾಗ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಜನಪ್ರಿಯ ದಾವಣಗೆರೆ ಬೆಣ್ಣೆ ದೋಸೆಗೆ ಭೌಗೋಳಿಕ ಸೂಚಕ ಪಡೆಯುವ ದಾರಿ ಕಷ್ಠಕರವಾಗಿದೆ.ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದನದಲ್ಲಿ ಕೋರಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ರೀತಿ ಉತ್ತರಿಸಿದೆ.
ದಾವಣಗೆರೆ ಹೊರತುಪಡಿಸಿಯೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಣ್ಣೆದೋಸೆ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಬೆಣ್ಣೆ ದೋಸೆ ಎಲ್ಲಡೆ ಸಿಗುವ ಆಹಾರ ಎಂದು ಪರಿಗಣಿಸಲಾಗಿದೆ. ಈ ಆಹಾರ ಹಲವಾರು ಸ್ಥಳಗಳಲ್ಲಿ ಉತ್ಪಾದನೆಯಾಗುತ್ತಿರುವ ಕಾರಣ ನಿರ್ದಿಷ್ಟ ಪ್ರದೇಶಕ್ಕೆ ಹೆಚ್ಚು ವಿಶಿಷ್ಟವಾಗಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಹಕಾರ ಸಚಿವ ಜಿತಿನ್ ಪ್ರಸಾದ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ರಸಗುಲ್ಲಾ, ಲೋನಾವಳ ಚಿಕ್ಕಿ ಮತ್ತು ಇತರ ಉತ್ಪನ್ನಗಳಿಗೆ ಈಗಾಗಲೇ ಜಿಐ ಟ್ಯಾಗ್ ಇದೆ. ಇದನ್ನು ಭಾರತದಾದ್ಯಂತ ವ್ಯಾಪಕವಾಗಿ ಉತ್ಪಾದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ದಾವಣಗೆರೆ ಬೆಣ್ಣೆ ದೋಸೆ ಕೂಡ ರಾಜ್ಯಾದ್ಯಂತ ಮಾರಾಟವಾಗುತ್ತಿದೆ. ಈ ಕಾರಣಕ್ಕಾಗಿ ಈ ವಿಶಿಷ್ಟ ಉತ್ಪನ್ನಕ್ಕಾಗಿ ಜಿಐ ಟ್ಯಾಗ್ ಅನ್ನು ಪಡೆದುಕೊಳ್ಳುವುದು ತಪ್ಪಲ್ಲ. ಜಿಐ ಟ್ಯಾಗ್‌ಗೆ ನೋಂದಣಿಗೆ ಕನಿಷ್ಠ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಪ್ರಭಾ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಂಜನಗೂಡು ರಸಬಾಳೆ, ಚನ್ನಪಟ್ಟಣದ ಮರದ ಗೊಂಬೆಗಳು, ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ಬೀದರ್‌ನ ಬಿದರಿ ಕಲೆ, ಇಳಕಲ್ ಹಾಗೂ ಮೊಳಕಾಲ್ಮುರು ಸೀರೆಗಳು, ಕೊಡಗಿನ ಕಿತ್ತಳೆ, ಅಪ್ಪೆಮಿಡಿ ಮಾವು, ಧಾರವಾಡ ಪೇಡಾ, ಬಾಬಾಬುಡನ್‌ಗಿರಿಯ ಅರೇಬಿಕಾ ಕಾಫಿ ಮುಂತಾದವು ಜಿಐ ಟ್ಯಾಗ್ ಪಡೆದಿವೆ.



