ದಾವಣಗೆರೆ: ವಿಧಾನಸಭೆಯಲ್ಲಿ ಎಸ್ಸಿ, ಎಸ್ಟಿಯ 52 ಶಾಸಕರಿದ್ದಾರೆ. ಒಟ್ಟು 52 ಶಾಸಕರಿದ್ದರೂ ಅಧಿಕಾರ ಹಿಡಿಯಲಾಗಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಎಸ್ಎಸ್ ಒಂದಿದೆ, ಡಿಎಸ್ಎಸ್ ಹತ್ತಾರಿವೆ. ಹತ್ತಾರು ಸಂಘಟನೆ ಮಾಡುವುದನ್ನು ನಿಲ್ಲಿಸಿ ಒಂದಾಗಬೇಕು ಎಂದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಉಪಜಾತಿಗಳಿವೆ. ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಉಪಜಾತಿಗಳಿವೆ. ಮುಂದಿನ ದಿನಗಳಲ್ಲಿ ಎಸ್ಸಿ, ಎಸ್ಟಿ ಸ್ವಾಮೀಜಿಗಳ ಸಭೆ ನಡೆಸುತ್ತೇವೆ. ಎಸ್ಸಿ, ಎಸ್ಟಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಸಭೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಪ್ರತಿಧ್ವನಿಸಿದೆ. ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರಿ ಚಿಂತನೆ ನಡೆಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠ, ಛಲವಾದಿ ಗುರುಪೀಠದ ಶ್ರೀಗಳು ಭಾಗಿ ಆಗಿದ್ದರು.



