ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಸೋಂಕು ಹಿನ್ನೆಲೆ ಮಾಸ್ಕ್ , ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದ 30,218 ಜನರಿಂದ ಜಿಲ್ಲಾ ಪೊಲೀಸರು 51. 67 ಲಕ್ಷ ರೂ. ದಂಡ ಸಂಗ್ರಹಿಸಿದ್ಧಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಕೋವಿಡ್-19 ವೈರಸ್ ಸೋಂಕು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಜನರಿಗೂ ತಮ್ಮ ಜವಾಬ್ದಾರಿಯನ್ನು ನಿಭಾಹಿಸುವ ಹೊಣೆ ನೀಡಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಗೆ ಬರಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರ ನಿಗದಿಪಡಿಸಿರುವ ಎಲ್ಲ ಸ್ಥಳಗಳಲ್ಲಿ ಜನರು ನಿಗದಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ನಿಯಮ ಪಾಲನೆ ಅನಿವಾರ್ಯ. ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲು ಸರ್ಕಾರ ಸೂಚನೆ ನೀಡಿದ್ದು, ಇದರನ್ವಯ ಜಿಲ್ಲೆಯಲ್ಲಿ ಈವರೆಗೆ ಪೊಲೀಸ್ ಇಲಾಖೆಯು ನಿಯಮ ಉಲ್ಲಂಘಿಸಿದ 30218 ಜನರಿಂದ 51.67 ಲಕ್ಷ ರೂ. ದಂಡ ಸಂಗ್ರಹಿಸಿದೆ.
ಕಳೆದ ಅ. 23 ರಿಂದ 29 ರವರೆಗೆ ಅಂದರೆ ಏಳು ದಿನಗಳ ಅವಧಿಯಲ್ಲಿಯೇ ನಿಯಮ ಉಲ್ಲಂಘಿಸಿದ 741 ಜನರಿಂದ 1. 10 ಲಕ್ಷ ರೂ. ದಂಡ ಸಂಗ್ರಹಿಸಿದೆ. ದಸರಾ ಹಬ್ಬದ ಅವಧಿಯಲ್ಲಿ ಅಂದರೆ ಅ. 25 ಮತ್ತು 26 ರಂದು ಎರಡು ದಿನಗಳ ಅವಧಿಯಲ್ಲಿ ಒಟ್ಟು 181 ಜನರಿಂದ 29350 ರೂ. ದಂಡ ಸಂಗ್ರಹಿಸಲಾಗಿದೆ. ಸಾರ್ವಜನಿಕರು ಇನ್ನಾದರೂ ಇಂತಹ ದಂಡ ಪ್ರಕ್ರಿಯೆಗೆ ಅವಕಾಶ ನೀಡದೆ, ಕೋವಿಡ್ ಪಿಡುಗನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸುವ ಮೂಲಕ ಸಹಕರಿಸಬೇಕು ಎಂದಿದ್ದಾರೆ.



