Connect with us

Dvgsuddi Kannada | online news portal | Kannada news online

ದಾವಣಗೆರೆ: ಮೊದಲನೇ ಹಂತದದಲ್ಲಿ10,692 ಜನರಿಗೆ ಕೊರೊನಾ ಲಸಿಕೆ..!

ದಾವಣಗೆರೆ

ದಾವಣಗೆರೆ: ಮೊದಲನೇ ಹಂತದದಲ್ಲಿ10,692 ಜನರಿಗೆ ಕೊರೊನಾ ಲಸಿಕೆ..!

ದಾವಣಗೆರೆ: ಮೊದಲನೇ ಹಂತದಲ್ಲಿ ಹೆಲ್ತ್‍ಕೇರ್ ವರ್ಕರ್ಸ್‍ಗೆ ಕೊರೊನಾ ಲಸಿಕೆ ನೀಡಲಿದ್ದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಿ ಟೆಂಪ್ಲೇಟ್‍ನಲ್ಲಿ ಪೋರ್ಟಲ್‍ಗೆ ಅಪ್‍ಲೋಡ್ ಮಾಡಲಾಗಿದೆ. 5771 ಸರ್ಕಾರಿ ಮತ್ತು 4921 ಖಾಸಗಿ ಸೇರಿದಂತೆ ಒಟ್ಟು 10,692 ಹೆಲ್ತ್‍ಕೇರ್ ವರ್ಕರ್ಸ್ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗಿದ್ದು ಮೊದಲನೇ ಹಂತಕ್ಕೆ ಲಸಿಕೆ ನೀಡಲು ಅಗತ್ಯವಾದ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕೋವಿಡ್ 19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ (ಜಿಲ್ಲಾ ಟಾಸ್ಕ್‍ಫೋರ್ಸ್) ಸಭೆಯು ಗುರುವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಕೋವಿಡ್ 19 ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ 5ನೇ ಟಾಸ್ಕ್‍ಫೋರ್ಸ್ ಸಭೆ ಇದಾಗಿದ್ದು, ಮೂರು ಹಂತಗಳಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

2ನೇ ಹಂತದಲ್ಲಿ ಫ್ರಂಟ್‍ಲೈನ್ ವರ್ಕರ್‍ಗಳಾದ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೋಂ ಗಾಡ್ರ್ಸ್, ಎನ್‍ಸಿಸಿ, ಎನ್‍ಎಸ್‍ಎಸ್, ವಿಪತ್ತು ನಿರ್ವಹಣೆ ಸ್ವಯಂ ಸೇವಕರುಗಳ ಪಟ್ಟಿ ತಯಾರಿಸಲಾಗುತ್ತಿದೆ. 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ದುರ್ಬಲ ವರ್ಗದ ಮತ್ತು 50 ವರ್ಷದೊಳಗಿನ ಇತರೆ ಆರೋಗ್ಯ ಸಮಸ್ಯೆ ಇರುವ ಜನರನ್ನು ಗುರುತಿಸಿ ಪಟ್ಟಿ ತಯಾರಿಸಲಾಗುವುದು ಎಂದರು.

ಲಸಿಕೆ ನೀಡುವ ಬಗ್ಗೆ ಮೈಕ್ರೊ ಪ್ಲಾನ್ ಸಿದ್ದವಾಗಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಆಗಿದೆ. ತಾಲ್ಲೂಕು ಮಟ್ಟದಲ್ಲಿ ಒಂದು ಸುತ್ತಿನ ಟಾಸ್ಕ್‍ಫೋರ್ಸ್ ಸಭೆ ಆಗಿದೆ. ಹಾಗೂ ತಾಲ್ಲೂಕು ವೈದ್ಯಾಧಿಕಾರಿ, ವೈದ್ಯಾಧಿಕಾರಿ ಮತ್ತು ಬಿಹೆಚ್‍ಇಓ ಗಳಿಗೆ ತರಬೇತಿ ಆಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಕಾರ್ಯಕ್ರಮ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ, ಮೇಲ್ವಿಚಾರಣೆ ಸೇರಿದಂತೆ ಇತರೆ ಅಧಿಕಾರಿಗಳ ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ.

ಮೂರು ಕೊಠಡಿ ವ್ಯವಸ್ಥೆ: ಲಸಿಕಾ ಕಾರ್ಯಕ್ರಮದಲ್ಲಿ ಮೂರು ಕೊಠಡಿಗಳ ವ್ಯವಸ್ಥೆ ಮಾಡಬೇಕಿದೆ. ಲಸಿಕಾ ಕೊಠಡಿ, ಲಸಿಕೆ ನೀಡಿದ ನಂತರ ನಿಗಾ ವಹಿಸಲು ನಿಗಾವಣೆ ಕೊಠಡಿ ಮತ್ತು ಸ್ವಲ್ಪ ಕಾಲ ವಿಶ್ರಾಂತಿ ನೀಡಲು ನಿರೀಕ್ಷಣಾ ಕೊಠಡಿ ಒಟ್ಟು ಮೂರು ಕೊಠಡಿಗಳ ವ್ಯವಸ್ಥೆ ಮಾಡಬೇಕಿದೆ. ಆದ ಕಾರಣ ಶಾಲೆಗಳು ಅಥವಾ ಸಮುದಾಯ ಭವನಗಳಲ್ಲಿ ಲಸಿಕೆ ಕಾರ್ಯಕ್ರಮ ಮಾಡಲು ಯೋಜಿಸಲಾಗುತ್ತಿದೆ.

ಲಸಿಕೆಯನ್ನು 2 ಡೋಸ್‍ಗಳಲ್ಲಿ ನೀಡಬೇಕಾಗಿದ್ದು ಮೊದಲ ಡೋಸ್ ಆಗಿ 3 ವಾರಗಳ ನಂತರ ಎರಡನೇ ಡೋಸ್ ನೀಡಲಾಗುವುದು. ಮೊದಲ ಹಂತ ಮತ್ತು ಎರಡನೇ ಹಂತಗಳಿಗೆ ಲಸಿಕಾಕಾರರು ಮತ್ತು ಸಿಬ್ಬಂದಿ ಕೊರತೆ ಆಗುವುದಿಲ್ಲ. ಆದರೆ ಮೂರನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದಾಗಿದ್ದು ಸಿಬ್ಬಂದಿಗಳ ಕೊರತೆಯಾಗುವುದರಿಂದ ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ತರಬೇತಿ ನೀಡಿ, ಅವರನ್ನು ನಿಗಾವಣೆ ಮತ್ತು ನಿರೀಕ್ಷಣಾ ಕೊಠಡಿಗಳಿಗೆ ನಿಯೋಜಿಸಬಹುದು.

ಈ ಲಸಿಕಾ ಕಾರ್ಯಕ್ರಮಕ್ಕೆ ನಗರದ ಮೆಡಿಕಲ್ ಕಾಲೇಜುಗಳ ಸಹಕಾರ ಅಗತ್ಯವಿದ್ದು ಈಗಾಗಲೇ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯರು/ಸಿಬ್ಬಂದಿಗೆ ತರಬೇತಿ ಆಗಿದ್ದು ಎಸ್‍ಎಸ್‍ಐಎಂಎಸ್ ಕಾಲೇಜಿಗೆ ಶೀಘ್ರದಲ್ಲೇ ತರಬೇತಿ ನೀಡಲಾಗುವುದು ಎಂದರು.ಜಿ.ಪಂ ಸಿಇಓ ಪ್ರತಿಕ್ರಿಯಿಸಿ, ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಲಸಿಕಾಕಾರು, ಇತರೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಬೇತಿ ಆದಷ್ಟು ಬೇಗ ಆಗಬೇಕು. ತಾಲ್ಲೂಕುಗಳಲ್ಲಿ ಸಹ ತರಬೇತಿಗಳಿಗೆ ದಿನಾಂಕ ನಿಗದಿಗೊಳಿಸುವಂತೆ ಸೂಚಿಸಿದರು.

ಡಬ್ಲ್ಯುಹೆಚ್‍ಓ ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಡಾ.ಶ್ರೀಧರ್ ಮಾತನಾಡಿ, ಕೋವಿಡ್ 19 ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಕೂಲ ಪರಿಣಾಮಗಳ ಕುರಿತು ಈಗಾಗಲೇ ಸಿದ್ದತೆ ನಡೆಲಾಗಿದೆ. ಎಲ್ಲಾ ಲಸಿಕಾ ಕಾರ್ಯಕ್ರಮಗಳಲ್ಲೂ ಪ್ರತಿಕೂಲ ಪರಿಣಾಮಗಳ ನಿರ್ವಹಣೆಗೆ ಒಂದು ವ್ಯವಸ್ಥೆ ಇದ್ದ ಹಾಗೆ ಇಲ್ಲಿಯೂ ಇರುತ್ತದೆ. ಆದರೆ ಈ ಲಸಿಕೆ ಕಾರ್ಯಕ್ರಮದಲ್ಲಿ ಹೆಚ್ಚುವರಿಯಾಗಿ ಕಾರ್ಡಿಯೋ, ಪಲ್ಮನರಿ, ನ್ಯೂರಾಲಜಿ ತಜ್ಞರನ್ನು ಸೇರಿಸಲಾಗಿದೆ. ಲಸಿಕೆಯಿಂದ ಏನಾದರೂ ಪ್ರತಿಕೂಲ ಪರಿಣಾಮ ಉಂಟಾದಲ್ಲಿ ಅದಕ್ಕೆ ಅವಶ್ಯಕವಾದ ಕಿಟ್‍ಗಳು ಇತರುತ್ತವೆ. ಪ್ರತಿ ಲಸಿಕಾ ಕಾರ್ಯಕ್ರಮದಂತೆ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಲಸಿಕಾ ಕಾರ್ಯಕ್ರಮ ನಿಷ್ಪಕ್ಷಪಾತವಾಗಿ ನಡೆಯುವ ಉದ್ದೇಶದಿಂದ ಖಾಸಗಿ ಮೆಡಿಕಲ್ ಕಾಲೇಜಿಗಳ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಹಾಗೂ ಜನರಲ್ಲಿ ಈ ಹೊಸ ಲಸಿಕೆ ಬಗ್ಗೆ ಅಂಜಿಕೆ, ತಪ್ಪು ಕಲ್ಪನೆಗಳನ್ನು ದೂರವಾಗಿಸಲು ಜಾಗೃತಿ ಅರಿವು ಮೂಡಬೇಕಿದ್ದು, ಇದಕ್ಕಾಗಿ ನಗರದ ವಿವಿಧ ಸಂಸ್ಥೆಗಳಾದ ರೋಟರಿ, ಲಯನ್ಸ್, ರೆಡ್‍ಕ್ರಾಸ್ ಇತರೆ ಸಂಸ್ಥೆಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಮುಖ್ಯವಾಗಿ ಜನರಲ್ಲಿ ಈ ಲಸಿಕೆ ಬಗ್ಗೆ ಅಂಜಿಕೆ ಮತ್ತು ತಪ್ಪು ಕಲ್ಪನೆಗಳು ದೂರವಾಗುವಂತೆ ವಿವಿಧ ಸಂಘ ಸಂಸ್ಥೆಗಳು ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಸಹಕರಿಸಬೇಕು. ಇನ್ನು ಪೊಲೀಸ್ ಇಲಾಖೆ ಮತ್ತು ಹೋಂ ಗಾಡ್ರ್ಸ ಸೇರಿದಂತೆ ಸುಮಾರು 2220 ಸಿಬ್ಬಂದಿಗಳನ್ನು ಮೊದಲನೇ ಹಂತದಲ್ಲಿ ಲಸಿಕೆ ನೀಡಲು ಪೋರ್ಟಲ್‍ನಲ್ಲಿ ಮಾಹಿತಿ ಅಪ್‍ಲೋಡ್ ಮಾಡಲಾಗುತ್ತಿದೆ. ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ಅಧಿಕಾರಗಳ ಜೊತೆ ಸಭೆ ನಡೆಸಿ ಅವರ ಮಾಹಿತಿಯನ್ನು ಅಪ್‍ಲೋಡ್ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ತಾವು ಜಾಥಾ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳಾದ ಡಾ.ಗಂಗಾಧರ್ ಕೆ.ಹೆಚ್. ಡಾ.ಮುರಳೀಧರ್, ಡಾ.ನಟರಾಜ್, ತಾಲ್ಲೂಕು ವೈದ್ಯಾಧಿಕಾರಿಗಳು, ಹೋಂ ಗಾಡ್ರ್ಸ್ ಕಮಾಂಡೆಂಟ್ ಅಧಿಕಾರಿ ಡಾ.ವೀರಪ್ಪ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಎನ್‍ಸಿಸಿ, ಎಸ್‍ಎಸ್‍ಐಎಂಎಸ್ ಕಾಲೇಜಿನ ಪ್ರಾಂಶುಪಾಲ ಪ್ರಸಾದ್, ರೋಟರಿ, ಲಯನ್ಸ್, ರೆಡ್‍ಕ್ರಾಸ್ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top