ಡಿವಿಜಿ ಸುದ್ದಿ, ಬೆಳಗಾವಿ: ಕೊರೊನಾ ಭೀತಿ ಹಿನ್ನೆಲೆ ಜಿಲ್ಲೆಯ ಪ್ರಸಿದ್ಧ ಸವದತ್ತಿಯ ಸುಕ್ಷೇತ್ರ ರೇಣುಕಾ ಯಲ್ಲಮ್ಮದೇವಿ, ಜೋಗುಳಬಾವಿ ಸತ್ತೆಮ್ಮದೇವಿ ಮತ್ತು ಚಿಂಚಲಿ ಮಾಯಕ್ಕದೇವಿ ದೇವಸ್ಥಾನಗಳನ್ನು ಮತ್ತೊಂದು ತಿಂಗಳು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ನ.30ರವರೆಗೆ ಸಾರ್ವಜನಿಕ ದರ್ಶನ ನಿಷೇಧಿಸಿಗೊಳಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ನೆರೆಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇದನ್ನು ತಡೆಯಲು, ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ದೇವಸ್ಥಾನಗಳ ಆಡಳಿತ ಮಂಡಳಿಯವರು ನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ನಡೆಸಲು ಷರತ್ತಿಗೆ ಒಳಪಟ್ಟು ವಿನಾಯಿತಿ ನೀಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾಹಿತಿ ನೀಡಿದ್ದಾರೆ.



