ಚಿತ್ರದುರ್ಗ: ಜಿಲ್ಲೆಯ ಭರಮಸಾಗರದಲ್ಲಿ 2025ರ ಫೆಬ್ರುವರಿಯಲ್ಲಿ 9 ದಿನಗಳ ಕಾಲ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಲಕ ಸಿದ್ಧತೆ ನಡೆಯುತ್ತಿದೆ. ಮಹಾಮಂಟಪ ನಿರ್ಮಾಣಕ್ಕೆ 200 ಎಕರೆ ವಿಸ್ತೀರ್ಣದ ಜಮೀನು ಗುರುತಿಸಿದ್ದು, ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮಹೋತ್ಸವದ ಸಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಮಹಾಮಂಟಪ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಮಿತಿ ಸದಸ್ಯರೆಲ್ಲರ ಸಹಕಾರ ಬೇಕು. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಪ್ರದೇಶದಲ್ಲಿ ಹುಣ್ಣಿಮೆ ಮಹೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಮಂಟಪ ನಿರ್ಮಾಣಕ್ಕೆ ಅವಧಿ ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಕೆಲಸ ಮುಗಿಸಬೇಕಾಗಿದೆ ಎಂದು ಸಮಿತಿ ಸದಸ್ಯ ಎಸ್.ಎಂ.ಎಲ್. ತಿಪ್ಪೇಸ್ವಾಮಿ ಮನವಿ ಮಾಡಿದರು.
ಸಮಿತಿಯ ಸದಸ್ಯ ಶಶಿ ಪಾಟೀಲ್, ನಿರಂಜನ್ ಮೂರ್ತಿ ಮತ್ತು ಏಕಾಂತಪ್ಪ ಹರಳಕಟ್ಟೆ, ಮಂಜನಗೌಡ ಮತ್ತು ಲೋಹಿತಾಶ್ವರಪ್ಪ, ಹಂಪನೂರು ಮತ್ತು ಎಮ್ಮೆ ಹಟ್ಟಿ ಭಾಗದ ರೈತರು ಜೊತೆಗೆ ತರಳಬಾಳು ಮಠದ ಕೃಷಿ ಸಮಿತಿಯ ಸದಸ್ಯರಾದ ಸಿ.ಆರ್. ನಾಗರಾಜ್, ಕೆ.ಎಂ. ಶಿವಮೂರ್ತಿ, ಕೆ. ಮಂಜುನಾಥ್, ದೊಡ್ಡಾಲಗಟ್ಟದ ಓಂಕಾರಪ್ಪ, ಮಂಡಲೂರು ಹನುಮಂತಪ್ಪ, ಹಳವುದರದ ಎಚ್.ಜಿ. ಸಿದ್ದಲಿಂಗಪ್ಪ ಇದ್ದರು.



