Connect with us

Dvgsuddi Kannada | online news portal | Kannada news online

ಭರಮಸಾಗರ ಏತ ನೀರಾವರಿ ಯೋಜನೆಗೆ ಗುರುವಾರ ತರಳಬಾಳು ಶ್ರೀ ಭೇಟಿ; ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪಗೆ ಆಹ್ವಾನ

ಪ್ರಮುಖ ಸುದ್ದಿ

ಭರಮಸಾಗರ ಏತ ನೀರಾವರಿ ಯೋಜನೆಗೆ ಗುರುವಾರ ತರಳಬಾಳು ಶ್ರೀ ಭೇಟಿ; ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪಗೆ ಆಹ್ವಾನ

ಸಿರಿಗೆರೆ: ಭರಮಸಾಗರ ಏತ ನೀರಾವರಿ ಯೋಜನಗೆ ಕಾರಣೀಕೃತರಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಭರಮಸಾಗರ  ಕೆರೆಗೆ ನೀರು ಹರಿದ ನಂತರ ಮೊದಲ ಬಾರಿಗೆ  ಇದೇ ಗುರುವಾರ (ದಿನಾಂಕ. 7.10.2021)  ಮಧ್ಯಾಹ್ನ 3:00 ಗಂಟೆಗೆ ಕೆರೆಯ ವೀಕ್ಷಣೆಗೆ ಆಗಮಿಸಲಿದ್ಧಾರೆ. ಶ್ರೀಗಳ ಜೊತೆ ಚಿತ್ರದುರ್ಗ ಮತ್ತು ದಾವಣಗೆರೆ  ಸಂಸದರು, ಹೊಳಲ್ಕೆರೆ   ಶಾಸಕ ಎಂ.ಚಂದ್ರಪ್ಪ  ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಇತರ ರಾಜಕೀಯ ಪ್ರಮುಖರು ಭಾಗಿಯಾಗಲಿದ್ದಾರೆ.

ಕೆರೆಗೆ ನೀರು ಹರಿದ ನಂತರ ಇದೇ ಮೊದಲ ಭಾರಿಗೆ ಬೆಂಗಳೂರಿನಿಂದ ಸಿರಿಗೆರೆಗೆ ಶ್ರೀಗಳು  ದಯಮಾಡಿಸಿದರು.  ಶ್ರೀಗಳಿಗೆ ಭರಮಸಾಗರ ಕೆರೆಯಿಂದ ತಂದಿದ್ದ ತುಂಗಭದ್ರಾ ಜಲದಿಂದ ರೈತರು ಪ್ರೋಕ್ಷಿಸಿ ಭಕ್ತಿ ಪೂರ್ವಕವಾಗಿ  ಬರಮಾಡಿಕೊಂಡರು. ನಂತರ ಐಕ್ಯ ಮಂಟಪಕ್ಕೆ  ದಯಮಾಡಿಸಿ  ಗುರು ಪಿತಾಮಹ  ಲಿಂಗೈಕ್ಯ  ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಮತ್ತು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಕರ್ತೃ ಗದ್ದುಗೆಗಳಿಗೆ ಶ್ರದ್ದಾ ಭಕ್ತಿಗಳನ್ನು ಸಮರ್ಪಿಸಿದರು.

ಮುಖ್ಯಮಂತ್ರಿಗಳಿಂದ ಉದ್ಘಾಟನೆ : ಇದೇ ಮಾದರಿಯಲ್ಲಿ ನೀರು ಹರಿದರೆ ನವಂಬರ್ ಮಧ್ಯ ಭಾಗದಲ್ಲಿ ಕೆರೆ ತುಂಬಿ ಹರಿಯಲಿದೆ. ಈ ಯೋಜನೆಯ ಮೊದಲ ಹಂತವು ಯಶಸ್ಸು ಕಂಡಿರುವ ಉದ್ಘಾಟನೆಯನ್ನು  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸುವರು. ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಸಚಿವ ಗೋವಿಂದ್ ಕಾರಜೋಳ ರವರ ಬಳಿ ಮಾತನಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಕರೆತರುವುದಾಗಿ ಸಚಿವರು ತಿಳಿಸಿರುವುದಾಗಿ ಪೂಜ್ಯರು ಸಭೆಯ ಗಮನಕ್ಕೆ ತಂದರು.

ಈ ವೇಳ ಆಶೀರ್ವಚನ ಕರುಣಿಸಿದ ಶ್ರೀಗಳು,  ಮೂರು ಶತಮಾನಗಳ ಹಿಂದೆ ನಿರ್ಮಾಣಗೊಂಡ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆಯು ಊಳು ತುಂಬಿಕೊಂಡು ಅದನ್ನು ಹೊರ ತಗೆಯದಂತಹ ಸ್ಥಿತಿ ನಿರ್ಮಾಣವಾಗಿದೆ. 565 ಕೋಟಿ ರೂ ವೆಚ್ಚದ ಹರಿಹರದ ಹಲಸಬಾಳು ಗ್ರಾಮದಿಂದ ತುಂಗಭದ್ರ ನದಿಯಿಂದ ನೀರು ಎತ್ತುವ ಭರಮಸಾಗರ ಏತ ನೀರವಾರಿ ಯೋಜನೆ ಈ ಭಾಗದ ಜನರ ಸಂಕಷ್ಟವನ್ನು ದೂರ ಮಾಡಿದೆ. 2018 ರಲ್ಲಿ ಆರಂಭವಾದ ಯೋಜನೆ ಏತ ನೀರಾವರಿ ಯೋಜನೆ 55.ಕಿ.ಮಿ ದೂರದ ರೈಸಿಂಗ್ ಮೇನ್ ಮೂಲಕ ತಲುಪುತ್ತಿದ್ದಂತೆ ಜನರ ಸಂತಸವು ನೀರಿನ ವೇಗಕ್ಕಿಂತಲೂ ರಭಸವಾಗಿ ಭಕ್ತಿ ರಸ ಗಂಗೆಯೊಂದಿಗೆ ಸಮೀಕರಣಗೊಂಡಿತು  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಗಳೂರು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು   ನಮ್ಮ ಒತ್ತಾಸೆಯಂತೆ ಬಜೆಟ್‌ನಲ್ಲಿ ಸೇರಿಸಿ 250 ಕೋಟಿ ವೆಚ್ಚದಲ್ಲಿ ಆರಂಭ ಮಾಡಿದ ಈ ಯೋಜನೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪನವರು ತೋರಿದ ಮುತುವರ್ಜಿಯಿಂದ 565 ಕೋಟಿ ರೂ ವೆಚ್ಚದ ಈ ಯೋಜನೆ 1000 ಸಾವಿರ ಎಕರೆ ವಿಸ್ತೀರ್ಣವಿರುವ ಭರಮಸಾಗರ ಕೆರೆಗೆ ಪ್ರಾಯೋಗಿಕವಾಗಿ ಹರಿದು ಯಶಸ್ಸು ಕಂಡಿದೆ. ಭರಮಸಾಗರ ಕೆರೆಯಲ್ಲಿ ಶಾಶ್ವತವಾಗಿ ನೀರು ಸಂಗ್ರಹವಾಗಲಿದ್ದು ಈ ಕೆರೆ ಸಂಪೂರ್ಣ ತುಂಬಿ  ಸುತ್ತಮುತ್ತಲ 42 ಕೆರೆಗಳಿಗೆ ಹರಿದು ಈ ಭಾಗದ ಬಡ ರೈತರ ಬವಣೆ ನೀಗಲಿದೆ ಎಂದು ತಿಳಿಸಿದರು. ಲಿಂಗೈಕ್ಯ ಗುರುವರ್ಯರ  29ನೇ ಶ್ರದ್ಧಾಂಜಲಿ ದಿನದಂದು ನೀರು ಭರಮಸಾಗರ ಕೆರೆಗೆ ಬರಬೇಕಿತ್ತು. ತಾಂತ್ರಿಕ ಕಾರಣಗಳಿಂದ ನೀರು ಅಲ್ಪ ವಿಳಂಭವಾಗಿತ್ತು. ಆಗಿನ ತಾತ್ಕಾಲಿಕ ವಿಘ್ನ ಈಗ ಬಗೆಹರಿದಿದ್ದು  ಗಂಗಾವತರಣವಾಗಿದೆ ಎಂದರು. ನೀವೆಲ್ಲರೂ ಕೆರೆಗೆ ನೀರು ಹರಿಯುವುದನ್ನು ಕಣ್ತುಂಬಿಕೊಂಡು ಸಂತೋಷಪಟ್ಟಿರುವುದು ನಮಗೆ ತೃಪ್ತಿ ತಂದಿದೆ ಎಂದರು.

ರೋಮ್  ಶೃಂಗ ಸಮ್ಮೇಳನದಲ್ಲಿ ತುಂಗಭದ್ರೆಯ ಸಿಂಚನ: ಇಂದಿನಿಂದ  ರೋಂ ನಲ್ಲಿ ಹವಾಮಾನ ವೈಪರೀತ್ಯ ಕುರಿತು (Climate Change) ಶೃಂಗ ಸಭೆ ನಡೆಯಲಿದೆ.   ಜಗತ್ತಿನಾದ್ಯಂತ ಅನೇಕ ದೇಶಗಳಿಂದ ಪ್ರಮುಖ ಧರ್ಮಗುರುಗಳು ಮತ್ತು ವಿಜ್ಞಾನಿಗಳನ್ನು ಆಹ್ವಾನಿಸಲಾಗಿದೆ.  ವಿಶ್ವರಾಷ್ಟ್ರಸಂಸ್ಢೆಯ  26 ನೆಯ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಪೂರಕವಾಗಿ ನಡೆಯಲಿರುವ ಈ ಶೃಂಗ ಸಭೆಯನ್ನು ಆಯೋಜಿಸಲು ಪ್ರಮುಖ ಪಾತ್ರ ವಹಿಸಿರುವವರು ಕ್ರೈಸ್ತ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ರವರು ಆಹ್ವಾನವನ್ನು  ಕಾರ್ಯಗೌರವದ ಹಿನ್ನೆಲೆಯಲ್ಲಿ ನಿರಾಕರಿಸದೆ  ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಸಂಯೋಜಕರಿಗೆ ವಿಷಾದ ವಕ್ತಪಡಿಸಿ ಕೆರೆ ತುಂಬಿಸುವ ಯೋಜನೆಗಳು ರೈತರಿಗೆ ಮತ್ತು ಪರಿಸರಕ್ಕೆ ಹೇಗೆ ಉಪಯೋಗವಾಗುವುದರ ಕುರಿತು ಸಂಕ್ಷಿಪ್ತವಾಗಿ ವೀಡಿಯೋದಲ್ಲಿ ದಾಖಲಿಸಿ ಕಳುಹಿಸಿಕೊಡಲಾಗಿದೆ.   ಅದನ್ನು ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಿಸಿ ಪ್ರಸಾರ ಮಾಡುವುದಾಗಿ ಸಂಯೋಜಕರು  ಮಿಂಚೋಲೆ ಬಂದಿದ್ದು, ತುಂಗಭದ್ರೆಯರ ಕಲರವವು ರೋಮ್  ನಗರವನ್ನು ತಲುಪಿದೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಆಪತ್ಕಾಲಿನ ನಿಧಿ ಸ್ಥಾಪನೆ: ಸರ್ಕಾರವು 565 ಕೋಟಿ ರೂಗಳ ಬೃಹತ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಸಮರ್ಪಕ ಕಾರ್ಯನಿರ್ವಹಣೆ ಈ ಭಾಗದ  ರೈತರ ಮೇಲಿದೆ. ಮುಂದಿನ ದಿನಗಳಲ್ಲಿ ಯೋಜನೆಯಲ್ಲಿ ಉಂಟಾಗಬಹುದಾದ  ತಾಂತ್ರಿಕ ತೊಂದರೆಗಳನ್ನು ರೈತರೇ ನಿರ್ವಹಣೆ ಮಾಡವಂತೆ ಪೂಜ್ಯ ಶ್ರೀ ಜಗದ್ಗುರುಗಳವರ ಅಧ್ಯಕ್ಷತೆಯಲ್ಲಿ  10 ಕೋಟಿ ರೂಗಳ ಆಪತ್ಕಾಲಿನ ನಿಧಿಯನ್ನು ಸಂಗ್ರಹಿಸಿ ತಕ್ಷಣದ ತೊಂದರೆಗಳಿಗೆ ಬಳಸಿಕೊಳ್ಳುವಂತೆ ಗಮನ ಹರಿಸಬೇಕಿದೆ ಎಂದು ಸಿ.ಆರ್. ನಾಗರಾಜ್ ಹೇಳಿದರು.

ಭರಮಸಾಗರ ಮಂಡಲ ಅಧ್ಯಕ್ಷ ಚೌಲೀಹಳ್ಳಿ ಶೈಲೇಶ್ ಕುಮಾರ್ ಮಾತನಾಡಿ  ಈ ಭಾಗದ ಅಡಕೆ ಬೆಳೆಗಾರರು ಸಹ ಸಾಲದಲ್ಲಿ ಮುಳುಗಿದ್ದು ತರಳಬಾಳು ಶ್ರೀ ಜಗದ್ಗುರುಗಳವರ ಜಲಕ್ರಾಂತಿ ಸಾಲದಿಂದ ಮುಕ್ತರನ್ನಾಗಿಸಲಿದೆ ಎಂದರು. ಕಾಂಗ್ರೆಸ್ ಮುಖಂಡ ಜಿ.ಬಿ. ತೀರ್ಥಪ್ಪ,  ಆಲಘಟ್ಟದ ಓಂಕಾರಪ್ಪ, ಓಬವ್ವನಾಗತೀಹಳ್ಳಿ ಮಂಜುನಾಥ್, ಶರತ್ ಕುಮಾರ್ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ಸ್ವಾಗತಿಸಿ ಕಾರ್ಯಕ್ರಮ  ನಿರ್ವಹಿಸಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top