ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗವಯ
(ಅಸತ್ಯದಿಂದ ಸತ್ಯದೆಡೆಗೆ ಕರೆದೊಯ್ಯಿ
ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಿ
ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದೊಯ್ಯಿ)
ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು. ಕೇಳಿದ್ದೇ ಕೇಳಿದ್ದು! ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿದೆಯೇ? ಕತ್ತಲಲ್ಲಿ ದೀಪ ಹಚ್ಚಿ ಆತ್ಮಾನುಸಂಧಾನ ಮಾಡುವ ಬದಲು ಪಟಾಕಿ ಹೊಡೆದು ಗಲಾಟೆ ಗದ್ದಲವೆಬ್ಬಿಸುವುದು ಇಂದಿನ ದೀಪಾವಳಿಯ ವಿಕೃತರೂಪವಾಗಿದೆ. ಇಂದು ಕಾಣುತ್ತಿರುವುದು ದೀಪಗಳ ಆವಳಿಯಲ್ಲ ಪಟಾಕಿಗಳ ಹಾವಳಿ..!
ಇಂತಹ ಹಬ್ಬಗಳಂದು ಪುರಾಣಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೇ ಇನ್ನೂ ಜೀವಂತವಾಗಿದ್ದಾರೆಂದು ಭಾವಿಸಿ ನಮ್ಮೊಳಗಿರುವ ರಾಕ್ಷಸೀ ಗುಣಗಳನ್ನು ನಿರ್ಮೂಲನಗೊಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾದಾವು..!
ಉಪಕಾರ ಮಾಡಿದ ವ್ಯಕ್ತಿಯನ್ನು ಕುರಿತು ‘ಅವರ ಹೆಸರು ಹೇಳಿ ದೀಪ ಹಚ್ಚುತ್ತೇನೆ’ ಎಂದು ಸ್ಮರಣೆ ಮಾಡಿದರೆ ಮನೆಮುರುಕನನ್ನು ಕುರಿತು ‘ಅವನು ಎಷ್ಟು ಮನೆ ದೀಪವನ್ನು ಅಳಿಸಿದ್ದಾನೋ ಗೊತ್ತಿಲ್ಲ’ ಎಂದು ಮೂದಲಿಸುತ್ತಾರೆ. ನಮ್ಮ ದೇಶದಲ್ಲಿ ದೀಪ ಹಚ್ಚುವುದಕ್ಕಿಂತ ಬೆಂಕಿ ಹಚ್ಚುವುದೇ ಜಾಸ್ತಿ !
ಮತ್ಸರದ ಬತ್ತಿ
ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ ಕಂಗೊಳಿಸುವುದು ಜ್ಯೋತಿ
ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಕುಯುಕ್ತಿ!
ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!
-ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ.