ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹತಾಶಯಲ್ಲಿರುವ ಕಾಂಗ್ರೆಸ್, ಬಿಟ್‌ಕಾಯಿನ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ, ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅನಗತ್ಯ ಆರೋಪ ಮಾಡುತ್ತಿದೆ. ಸಿಎಂ ಬದಲಾವಣೆ ಕಪೋಲಕಲ್ಪಿತ. ಕಾಂಗ್ರೆಸ್ ಪಿತೂರಿ ಮೂಲಕ ಆಡಳಿತದ ವೇಗವನ್ನು ಕುಂಠಿತ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ವಿಧಾನಸಭಾ ಚುನಾವಣೆ ಒಂದೂವರೆ ವರ್ಷ ಇದ್ದು, ಅಲ್ಲಿಯವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.
ಕಾಂಗ್ರೆಸ್ ಹಾನಗಲ್ ಉಪ ಚುನಾವಣೆ ಒಂದನ್ನು ಗೆದ್ದಿರಬಹುದು. ಹಿಂದೆ ನಡೆದಂತಹ ಎಲ್ಲ ಚುನಾವಣೆಗಳಲ್ಲಿ ಸೋತಿದೆ. ಸೋಲಿನಿಂದ ಹತಾಶರಾಗಿ ಆರೋಪ ಮಾಡುತ್ತಿದ್ದಾರೆ. ಹಾನಗಲ್ ನಲ್ಲಿ ನಾವು ಎಲ್ಲೋ ಎಡವಿದ್ದೇವೆ. ಸಾಕಷ್ಟು ಪ್ರಯತ್ನ ಮಾಡಿದರೂ ಜಯ ಸಿಕ್ಕಲಿಲ್ಲ. ಮುಂದಿನ ದಿನಗಳ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.ಮುಖ್ಯಮಂತ್ರಿಯವರೇ ಯಾವುದೇ ರೀತಿಯ ತನಿಖೆಗೂ ಸಿದ್ಧ ಎಂದಿದ್ದಾರೆ. ಆದರು ಇಲ್ಲಸಲ್ಲದ ಆರೋಪ ಮಾಡುವುದು ಶೋಭೆ ತರುವಂತದ್ದಲ್ಲ ಎಂದರು.
ವಾಲ್ಮೀಕಿ ಸಮಾಜದ ಮೀಸಲಾತಿ ವಿಚಾರ ಸೇರಿದಂತೆ ಬಹುತೇಕ ಸಮಾಜಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿಯವರು ಸ್ಪಂದಿಸಲಿದ್ದಾರೆ. ಈ ವಿಚಾರದಲ್ಲಿ ಯಾವುದೇ ಸಮಾಜದ ಸ್ವಾಮೀಜಿಗಳು ಆತಂಕ ಪಡಬಾರದು ಎಂದು ಮನವಿ ಮಾಡಿದರು.
ವಿಧಾನ ಸಭಾ ಚುನಾವಣೆಗೆ ಇನ್ನು ಕಾಲಾವಕಾಶ ಇದೆ. ಉಪಾಧ್ಯಕ್ಷನಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಚುನಾವಣೆಗೆ ನಿಲ್ಲಬೇಕೋ, ಬೇಡವೋ ಎನ್ನುವುದನ್ನು ಪಕ್ಷದ ಮುಖಂಡರು ನಿರ್ಧರಿಸುತ್ತಾರೆ. ಪಕ್ಷ ಎಲ್ಲಿ ಸೂಚನೆ ನೀಡುತ್ತದೆಯೋ ಆ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದರು.