Connect with us

Dvg Suddi-Kannada News

ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ : ಸಾರ್ವಜನಿಕರಿಂದ ಸಮಸ್ಯೆಗಳ ಮಹಾಪೂರ

ದಾವಣಗೆರೆ

ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ : ಸಾರ್ವಜನಿಕರಿಂದ ಸಮಸ್ಯೆಗಳ ಮಹಾಪೂರ

 ಡಿವಿಜಿಸುದ್ದಿ.ಕಾಂ. ದಾವಣಗೆರೆ: ಬಸ್ ಸೌಲಭ್ಯ, ಮಾಲಿನ್ಯ ತಡೆ, ಕೆಎಸ್ ಆರ್ ಟಿಸಿ  ಬಸ್ ಡಿಪೋ ನಿರ್ಮಾಣ, ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ, ಉದ್ಯೋಗ,  ಕಂದಾಯ ಭೂಮಿ ಖಾತೆ ಬದಲಾವಣೆ ಹೀಗೆ… ಹಲವಾರು ಸಮಸ್ಯೆ ಹೊತ್ತು ತಂದ ಸರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿದಸಿದರು.

ಜಿಲ್ಲಾಡಳಿತ ಆಯೋಜಿಸಿದ್ದ ಜನಸ್ಪಂದನ  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ  ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ ಸಾರ್ವಜನಿಕರು   ತಮ್ಮಅಹವಾಲು ತೋಡಿಕೊಂಡರು.

ಧೂಳಿನ ರಸ್ತೆಗೆ ಮುಕ್ತಿ ನೀಡಿ

ನಗರದಲ್ಲಿ ವಿವಿಧ  ಯೋಜನೆಯಡಿ  ಕಾಮಗಾರಿಗಳು ಪ್ರಗತಿಯಲ್ಲಿದ್ದು, ರಿಂಗ್ ರಸ್ತೆಯಲ್ಲಿ ಮಣ್ಣು ಅಗೆದು ಹಾಕಲಾಗಿದೆ. ಇದರಿಂದ ಧೂಳು ಬರುತ್ತಿದೆ. ಚರಂಡಿಗಳ ಪಕ್ಕದಲ್ಲಿ ಮಣ್ಣನ್ನು ಹಾಕಿ ಸಮತಟ್ಟು ಮಾಡಿಲ್ಲ ಹಾಗೂ ರಸ್ತೆಗಳ  ಗುಂಡಿಗಳಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.  ಹಲವು ರಸ್ತೆಗಳಲ್ಲಿ ಡ್ರೈನೇಜ್ ವ್ಯವಸ್ಥೆ ಇರುವುದಿಲ್ಲ. ಮಾಹಿತಿ ಫಲಕಗಳಿಲ್ಲ ಆದ್ದರಿಂದ ಈ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ, ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಎಸ್ ಪಿಎಸ್  ನಗರ ನಿವಾಸಿ ಮಹಾಲಕ್ಷ್ಮಿ ಸೇರಿದಂತೆ ಇತರರು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಮಾರ್ಟ್ ಸಿಟಿ ಅಧಿಕಾರಿಗಳೂ ಸಭೆಗೆ ಬರಬೇಕು. ಈ ಮನವಿಯನ್ನು ಸ್ಮಾರ್ಟ್ ವ್ಯವಸ್ಥಾಪಕರಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ  ಎಂದರು.

ಕೆಎಸ್ ಆರ್ ಟಿಸಿಗೆ ಜಾಗ ನೀಡಿ

ಚನ್ನಗಿರಿ ತಾಲ್ಲೂಕಿಗೆ ಇದುವರೆಗೆ ಕೆಎಸ್ ಆರ್ ಟಿಸಿ  ಬಸ್ ಡಿಪೋ ಇಲ್ಲದ ಕಾರಣ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದೇ ತೊಂದರೆಯಾಗುತ್ತಿದೆ. ಡಿಪೋ ಸ್ಥಾಪಿಸಲು ಒತ್ತಾಯದ ಮೇರೆಗೆ ಇತ್ತೀಚೆಗೆ ಕೆಎಸ್ ಆರ್ ಟಿಸಿ  ಅಧಿಕಾರಿಗಳು  ತಾಲ್ಲೂಕಿನ ಚಿಕ್ಕಲಿಕೆರೆ ಗ್ರಾಮದಲ್ಲಿ 4 ಎಕರೆ ಜಮೀನು  ಪರಿಶೀಲಿಸಿದ್ದಾರೆ.   ಈ ಜಮೀನನ್ನು ಕೆಎಸ್ ಆರ್ ಟಿಸಿಗೆ  ಮಂಜೂರಾತಿ ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ  ರುದ್ರಮುನಿ ಮನವಿ ಸಲ್ಲಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಎಸಿ ಯವರು ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಂಡು ಮುಂದಿನ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹೆಚ್ಚುವರಿ ಬಸ್ ಗಾಗಿ ಮನವಿ

ಚನ್ನಗಿರಿ ತಾಲ್ಲೂಕಿನ ತ್ಯಾವಣಿಗಿ ಗ್ರಾಮದಿಂದ ದಾವಣಗೆರೆ ದಿನ ನಿತ್ಯ 2 ವಿದ್ಯಾರ್ಥಿಗಳು 800  ಜನ ಅಂಗವಿಕಲರು, ಹಿರಿಯ ನಾಗರೀಕರು, ಅಧಿಕಾರಿಗಳು ಸೇರಿದಂತೆ ದಿನನಿತ್ಯ ಪ್ರಯಾಣಿಸುತ್ತಿದ್ದಾರೆ.  ಈ ಗ್ರಾಮಗಳಿಗೆ ಹೆಚ್ಚುವರಿ ಬಸ್ ಸಂಚಾರದ ಅವಶ್ಯಕತೆ ಇದ್ದು, ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತ್ಯಾವಣಿಗಿಯ ಟಿ.ಎನ್.ವೀರೇಂದ್ರಕುಮಾರ್, ದೊಡ್ಡಘಟ್ಟದ ಅಲ್ಲಾಭಕ್ಷ, ಕೆರೆಬಿಳಚಿಯ ಹೈದರ್ ಅಲಿ ಖಾನ್ ಎಂಬುವರು ಮನವಿ ಮಾಡಿದರು.

ಮಾಗಾನಹಳ್ಳಿ ಪ್ರಕಾಶ್ ಹಾಗೂ ಅವರ ಸಹೋದರ, ಹೈಸ್ಕೂಲ್ ಮೈದಾನದ ಹಿಂಭಾಗದಲ್ಲಿರುವ 5 ಎಕರೆ 14 ಗುಂಟೆ ಜಮೀನಿನ ಮೂಲ ಮಾಲೀಕರು ನಾವಾಗಿದ್ದೇವೆ. ಪಹಣಿ ಕೂಡ ನಮ್ಮ ಹೆಸರಲ್ಲಿದೆ. ಆದರೂ ದಾವಣಗೆರೆ ಎಸಿ ಯವರು ನಮ್ಮ ಹೆಸರಿಗೆ ಖಾತೆ ಮಾಡಿಕೊಡದೆ, ಪ್ರಸ್ತುತ ಸ್ವಾಧೀನದಲ್ಲಿರುವವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ನಮ್ಮಿಂದ ಹಣ ನಿರೀಕ್ಷಿಸುತ್ತಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ದೂರಿದರು. ಈ ಜಾಗಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಡಿಸಿ ಕಚೇರಿಯಲ್ಲಿಯೂ ಈ ಪ್ರಕರಣವಿದ್ದು, ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಖಾತೆ ಸೇರಿದಂತೆ ಯಾವುದೇ ದಾಖಲೆಗಳನ್ನು ಮಾಡಿಸಲು ಒಂದು ವಿಧಾನ ಇರುತ್ತದೆ. ಆ ಖಾತೆ ವಜಾ ಮಾಡಿಸಲು ಅಪೀಲು  ನೀಡಬೇಕು. ನಂತರ ಈ ಕುರಿತು ವಿಚಾರಣೆ ನಡೆಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿ ತೆಗೆದುಕೊಂಡು ಬಂದಲ್ಲಿ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಮೋತಿವೀರಪ್ಪ ಬಡಾವಣೆಯಲ್ಲಿ ರಸ್ತೆ ಮೇಲೆ ಕಾಂಪೌಂಡ್ ‍ ನಿರ್ಮಿಸಲಾಗಿದ್ದು, ಈ ಕಾಂಪೌಂಡ್ ತೆರವುಗೊಳಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಅರ್ಜಿಯನ್ನು ಪಾಲಿಕೆ ಆಯುಕ್ತರಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಉದ್ಯೋಗ ನೀಡಿ

ನಮಗೆ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಕಂಪ್ಯೂಟರ್ ಜ್ಞಾನವಿದ್ದು, ಯಾವುದಾದರೂ ಕೆಲಸ ದೊರಕಿಸಿಕೊಡುವಂತೆ  ದಾವಣಗೆರೆ ನಗರದ ಶಕ್ತಿನಗರ ಯುವತಿಯರು  ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಬಸವರಾಜ್ ಬಣಕಾರ್, ದಾವಣಗೆರೆ ವಿವಿ ಕಚೇರಿಯಲ್ಲಿ ಕೆಲಸ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಡಿಹೆಚ್ ಒ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ, ಆರ್ ಟಿ ಒ ಎನ್.ಜೆ.ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top