ಚೆನ್ನೈ: ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ಯ ಡಾ.ಮಧು ತೊಟ್ಟಪ್ಪಿಲಿಲ್ ವಿವಾದಾತ್ಮಕ ಹೇಳಿಕೆ ನೀಡಿ ತಂಡದಿಂದ ಕಿಕೌಟ್ ಆಗಿದ್ದಾರೆ.

ದೇಶಕ್ಕಾಗಿ ಹೋರಾಡಿದ ಹುತಾತ್ಮರಿಗೆ ದೇಶದ ಜನ ಗೌರವ ಸಲ್ಲಿಸುತ್ತಿದ್ದರೆ, ಸಮಯದಲ್ಲಿ ಡಾ.ಮಧು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದರು. ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳು ಇವೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ ಎಂದು ಡಾ.ಮಧು ತೊಟ್ಟಪ್ಪಿಲಿಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಹಿನ್ನೆಲೆ ಸಿಎಸ್‍ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ತಂಡದಿಂದ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಡಾ.ಮಧು ತೊಟ್ಟಪಿಲಿಲ್ ಟ್ವೀಟ್‍ನಿಂದಾಗಿ ನೆಟ್ಟಿಗರು ತೀವ್ರ ತರಾಟೆ ತಗೆದುಕೊಂಡಿದ್ದರು. ಹೀಗಾಗಿ ತಕ್ಷಣವೇ ಸಿಎಸ್‍ಕೆ ಕ್ರಮ ಕೈಗೊಂಡು ವೈದ್ಯರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್, ಡಾ.ಮಧು ಅವರ ವೈಯಕ್ತಿಕ ಟ್ವೀಟ್ ವಿಚಾರ ನಮಗೆ ತಿಳಿದಿರಲಿಲ್ಲ. ಅವರನ್ನು ತಂಡದ ವೈದ್ಯರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಿಎಸ್‍ಕೆ ತಿಳಿಸಿದೆ.



