ಡಿವಿಜಿ ಸುದ್ದಿ, ಬೆಂಗಳೂರು: ಪೆಟ್ರೋಲ್, ಡೀಸೆಲ್ ನಿರಂತರವಾಗಿ ಏರಿಕೆಯಾಗುತ್ತಿದ್ದು, ದರ ಏರಿಕೆ ನಿಯಂತ್ರಣ ಮಾಡಲು ಪ್ರಧಾನಿ ಮೋದಿ ವಿಫಲವಾಗಿದ್ದಾರೆ ಎಂದು ಮಾಜಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೆಪಿಸಿಸಿ ವತಿಯಿಂದ ಇಂದು ಆಯೋಜಿಸಿದ್ದ ಸೈಕಲ್ ಚಳವಳಿ ಹಾಗೂ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದರ ಏರಿಕೆ ಇಳಿಸುವಲ್ಲಿ ವಿಫಲರಾದ ಮೋದಿಯವರದ್ದು ರಾಕ್ಷಸೀ ಪ್ರವೃತ್ತಿ. ಅವರಿಗೆ ಮಾನವೀಯತೆ ಎಂಬುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಯುಪಿಎ ಅವಧಿಯಲ್ಲಿ ತೈಲ ದರ ಏರಿಕೆಯಾದರೆ ಬಿಜೆಪಿಯವರು ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಗಳನ್ನು ಹೊತ್ತು ಬೀದಿಗೆ ಇಳಿಯುತ್ತಿದ್ದರು. ಇದೀಗ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಿದ್ದರೂ, ಬಿಜೆಪಿಗರು ಯಾಕೆ ಮಾತನಾಡುತ್ತಿಲ್ಲ ಎಂದರು.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ್ ದರವನ್ನು ಏರಿಸಿ ಜನ ಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಮನಮೋಹನ ಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಯವರಿಗೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನರನ್ನು ಸುಲಿಗೆ ಮಾಡುವ ಜನ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಕಳೆದ 22 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊರೊನಾ ಪರಿಣಾಮ ಉದ್ಯೋಗ ಇಲ್ಲದೆ ಪರದಾಡುತ್ತಿರುವ ಮಧ್ಯಮ ವರ್ಗದ ಜನತೆ ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಇದರಿಂದ ಭಾರಿ ಹೊಡೆತ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಕಚ್ಛಾ ತೈಲ ದರ ಬ್ಯಾರಲ್‍ಗೆ 130 ಡಾಲರ್‍ನಂತೆ ಮಾರಾಟವಾಗುತ್ತಿದ್ದಾಗಲೇ ಅಂದಿನ ಯುಪಿಎ ಸರ್ಕಾರ ದರ ಏರಿಕೆಯನ್ನು ಈ ಪ್ರಮಾಣದಲ್ಲಿ ಮಾಡಿರಲಿಲ್ಲ. ಈಗ ತೈಲ ದರ ಇದೀಗ ಬ್ಯಾರಲ್‍ಗೆ 20-30 ಡಾಲರ್ ನಂತೆ ಮಾರಾಟವಾಗುತ್ತಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಲೀಟರ್ 25-30 ಮಾರಾಟವಾಗಬೇಕಿತ್ತು. ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಯದ್ವಾತದ್ವ ಏರಿಕೆ ಮಾಡುವ ಮೂಲಕ 18 ಲಕ್ಷ ಕೋಟಿ ಸಂಗ್ರಹ ಮಾಡಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಸಾಮಾನ್ಯ ಜನರ ರಕ್ತ ಹೀರುವ ಸರ್ಕಾರವಿದೆ. ಆಡಳಿತ ನಡೆಸುತ್ತಿರುವವವರು ಮಾನವೀಯತೆಯನ್ನೇ ಮರೆತು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದರು. ಸಿದ್ದರಾಮಯ್ಯ ಅವರು ಬೆಳಿಗ್ಗೆ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಸೈಕಲ್ ನಲ್ಲಿ ತೆರಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.



