‘ಆಧ್ಯಾತ್ಮ ಅಂದ್ರೆ ಏನು?’
ಈ ಪ್ರಶ್ನೆಯನ್ನ ನನಗೆ ಬಹಳ ಜನ ಕೇಳಿದ್ದಾರೆ.
ಆಧ್ಯಾತ್ಮದ ಮೇರುಶಿಖರವೇರಿದ ವ್ಯಕ್ತಿಗಳೆಲ್ಲಾ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ನನ್ನ ಪ್ರಕಾರ ನಿಸರ್ಗವೇ ಆಧ್ಯಾತ್ಮ. ಅದೇ ನಮಗೆ ಆಧ್ಯಾತ್ಮದ ನೆಲೆ. ಸಕಲ ಚರಾಚರವೂ ಆ ಆಧ್ಯಾತ್ಮದ ಒಳಗಿಂದಲೇ ಮೂಡಿ ಬಂದವು. ದೇವರು ಅನ್ನೋ ಅಮೂರ್ತ ರೂಪವೂ ಆಧ್ಯಾತ್ಮದ ಒಂದು ಭಾಗವೆ. ನಿಸರ್ಗವೇ ದೇವರು ಅನ್ನೋ ಸತ್ಯವನ್ನ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದೆ ಅದಕ್ಕಾಗಿ ಪಾಲಿಸುತ್ತಿಲ್ಲ ಅನ್ನೋದೆ ದೊಡ್ಡ ಕೊರಗು.

ಯಾಕೆ ಹೇಳಿದೆ ಎಂದರೆ ಗಿಡಮರಗಳಿಗೆ ಜೀವವಿಲ್ಲ ಅನ್ನೋದು ಜನಸಾಮಾನ್ಯರ ತಪ್ಪು ತಿಳುವಳಿಕೆ. ಆದ್ರೆ ಸ್ವಲ್ಪ ಗಮನಿಸಿ ನೋಡಿದರೆ ಈ ನೆಲ, ಮಣ್ಣು, ಗಿಡಮರ ಎಲ್ಲಕ್ಕೂ ಜೀವವಿದೆ. ಮಣ್ಣಿಗೆ ಜೀವವಿಲ್ಲ ಅನ್ನೋದಾದ್ರೆ ಅಲ್ಲಿ ಹಾಕಿದ ಬೀಜವೇಕೆ ಮೊಳಕೆಯೊಡೆಯುತ್ತದೆ? ಗಿಡಮರಕ್ಕೆ ಜೀವವಿಲ್ಲ ಅಂತಾದ್ರೆ ಅದ್ಯಾಕೆ ಬೆಳೆದು ನಿಲ್ಲುತ್ತದೆ? ಹಣ್ಣು ಹಂಪಲು ಕೊಡುತ್ತದೆ? ನಿಸರ್ಗದಲ್ಲಿರುವ ಪ್ರತಿಯೊಂದೂ ಉಸಿರಾಡುತ್ತದೆ. ನೀರು ಕೂಡ. ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಒಂದಿಲ್ಲೊಂದು ದಿನ ಫಲ ನೀಡುತ್ತದೆ ಅನ್ನೋದು ಈ ಜಗತ್ತಿನ ಅಪ್ಪಟ ಸತ್ಯ. ಇದಕ್ಕೆ ಸಾಕ್ಷಿ ಈ ಛಾಯಾಚಿತ್ರಗಳು.

ಶ್ರೀಪೀಠದ ಆವರಣದಲ್ಲಿರುವ ಈ ಮರಗಿಡಗಳೆಲ್ಲಾ ನನಗೆ ಅತ್ಯಾಪ್ತ. ಮನುಷ್ಯರಲ್ಲಿ ಮಾತ್ರ ಆಪ್ತತೆಯನ್ನ ಪ್ರೀತಿಯನ್ನ ಕಾಣಬಾರದು. ಗಿಡಮರಗಳಲ್ಲೂ ಅತ್ಯಾಪ್ತತೆ ಇದೆ. ಪ್ರೀತಿ ಇದೆ. ಅದನ್ನ ಕಂಡುಕೊಳ್ಳಬೇಕೆಂದ್ರೆ ನಮ್ಮ ಒಳಮನಸ್ಸು ಸದಾ ಜಾಗೃತವಾಗಿರಬೇಕು.
ನಿಮ್ಮ ಮನೆಯ, ತೋಟದ ಹಿತ್ತಿಲಿನಲ್ಲಿರುವ ಚಿಕ್ಕದ್ದೇ ಆಗಿರಲಿ ದೊಡ್ಡದ್ದೇ ಆಗಿರಲಿ ಮರ ಗಿಡ ಹೂ ಎಲ್ಲವುಗಳನ್ನ ಮಾತಾಡಿಸಿ ನೋಡಿ. ಅವು ನಿಜಕ್ಕೂ ಮಾತಾಡುತ್ತವೆ. ನಿಮ್ಮ ಜೊತೆ ಸಂಹವನ ನಡೆಸುತ್ತವೆ. ನಿಜ ಹೇಳಬೇಕು ಅಂದ್ರೆ ಆ ಸಂಹವನ ನಿಮ್ಮ ಕಣ್ಣಿಗೆ ಮನಸ್ಸಿಗೆ ಗೊತ್ತಿದೆ. ಒಂದು ಹೂ ನೋಡಿ ಖುಷಿಯಾಗುತ್ತದೆ, ಹಸಿರು ನೋಡಿ ಮನಸ್ಸು ಹಿಗ್ಗುತ್ತದೆ ಅಂದ್ರೆ ಅದರ ಭಾವ ಮತ್ತು ಭಾಷೆ ನಮಗೆ ಅರ್ಥವಾಗಿದೆ, ಸಂಹವನ ನಡೆದಿದೆ ಅಂತ ತಾನೆ ಅರ್ಥ.

ನಮ್ಮ ಮೈ ಬಣ್ಣ ಭೂಮಿಗೆ ಕೊಟ್ಟು ಭೂಮಿಯ ಮೈ ಬಣ್ಣ ನಾವು ತೆಗೆದುಕೊಂಡರೆ ಪ್ರತಿಯಾಗಿ ಹಣ್ಣುಗಳು ತಮ್ಮ ಮೈ ಬಣ್ಣವನ್ನ ನೀಡುವುದರ ಮೂಲಕ ಭೂಮಿಯ ಮತ್ತು ನಮ್ಮ ಋಣ ತೀರಿಸುತ್ತವೆ.ಇದು ನಮ್ಮ ಮತ್ತು ಭೂಮಿಯ ಕೊಡುಕೊಳ್ಳುವಿಕೆಯ ಸಂಬಂಧ.
ಅಂದ್ರೆ ಮೊದಲೇ ಹೇಳಿದ ಹಾಗೆ ಅಧ್ಯಾತ್ಮ ಅಂದ್ರೆ ನಿಸರ್ಗದಲ್ಲಿ ಒಂದಾಗಿ ಜೀವಿಸುವುದು. ದುರಂತ ಅಂದರೆ ಅದನ್ನ ನಾವೀಗ ಮರೆತಿದ್ದೇವೆ ಅಂತ ನನಗಾದರೂ ಅನಿಸುತ್ತಿದೆ. ಮತ್ತೆ ಅಧ್ಯಾತ್ಮಮುಖಿಯಾಗಿ ಬದುಕಬೇಕು. ನಿಸರ್ಗ ಅದನ್ನ ಬಯಸುತ್ತದೆ. ಇಲ್ಲದಿರೆ ಧಿಕ್ಕರಿಸಿ ನಡೆಯುತ್ತದೆ. ನಮಗೆ ಅದರ ಅವಶ್ಯಕತೆಯೇ ವಿನಃ ನಮ್ಮ ಅವಶ್ಯಕತೆ ಖಂಡಿತ ಇಲ್ಲ.
-ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.


