ಪುರಾಣವೆಂಬುದು ಪುಂಡರ ಗೋಷ್ಠಿ ಎಂದು ಅಲ್ಲಮಪ್ರಭುಗಳು ಕಟು ಟೀಕೆ ಮಾಡಿದ್ದು ಇದೇ ಕಾರಣಕ್ಕೆ ಇರಬಹುದೆ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ವಿಶ್ವದೆಲ್ಲೆಡೆ ಕೊರೊನಾ ವೈರಾಣು ವ್ಯಾಪಕವಾಗಿ ಹರಡಿ ಮನುಕುಲವನ್ನೇ ಹೈರಾಣಾಗಿಸಿದೆ. ಒಂದು ರೀತಿಯಲ್ಲಿ ಮೂರನೆಯ ಮಹಾಯುದ್ಧವೇ ಆರಂಭಗೊಂಡಂತಿದೆ. ಆದರೆ ಬಾಂಬು ರಾಕೆಟ್ಟುಗಳ ಸ್ಫೋಟವಿಲ್ಲ. ಮದ್ದು ಗುಂಡುಗಳ ಆರ್ಭಟವಿಲ್ಲ. ದೇಶ ದೇಶಗಳ ಮಧ್ಯದ ಕಾಳಗವೂ ಅಲ್ಲ. ಎಲ್ಲ ದೇಶಗಳು ಒಟ್ಟಾಗಿ ಒಂದು ಸಣ್ಣ ವೈರಾಣುವಿನ ವಿರುದ್ಧ ನಡೆಸುತ್ತಿರುವ ಬಹುದೊಡ್ಡ ಹೋರಾಟ. ವೈದ್ಯಕೀಯ ಲೋಕದಲ್ಲಿ ಯಾವ ಪರಿಹಾರವೂ ಕಾಣದೆ ಜನರ ಸಾವು -ನೋವು. ನೆಲದಲ್ಲಿರುವ ತಗ್ಗು ಗುಂಡಿಗಳಿಗೆ ಕಲ್ಲು ಗುಂಡಿಗಳನ್ನು ದೂಡುವಂತೆ ಯಾವ ಧಾರ್ಮಿಕ ಸಂಸ್ಕಾರವೂ ಇಲ್ಲದೆ ಹೆಣಗಳನ್ನು ರಾಶಿ ರಾಶಿಯಾಗಿ ಜೆಸಿಬಿ / ಹಿಟಾಚಿಗಳ ದೂಡುತ್ತಿರುವ ಕರಾಳ ದೃಶ್ಯ! ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಭೂಮಿಯ ಮೇಲೆ ಮನುಕುಲವೇ ಅಳಿಸಿ ಹೋಗಬಹುದೆಂಬ ಭಯ ಆವರಿಸಿದೆ. ಲಾಕ್ ಡೌನ್ ಕಾರಣದಿಂದ ಭಾರತದಲ್ಲಿ ಹಸಿವಿನಿಂದ ಕಂಗಾಲಾದ ಬಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನು ಕುರಿತಂತೆ ಅಷ್ಟಾದಶ ಪುರಾಣಗಳಲ್ಲಿ ಒಂದಾದ ಶಿವಪುರಾಣದಲ್ಲಿ ಬಹಳ ಹಿಂದೆಯೇ ಹೇಳಲಾಗಿದೆ ಎನ್ನಲಾದ ಈ ಕೆಳಕಂಡ ಸಂಸ್ಕೃತ ಶ್ಲೋಕಗಳು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿವೆ.

ಮೃತ್ಯುಂಜಯ ಮಹಾದೇವ! ಕೊರೋನಾಖ್ಯಾದ್ವಿಷಾಣುತಃ ।
ಮೃತ್ಯೋರಪಿ ಮಹಾಮೃತ್ಯೋ ಪಾಹಿ ಮಾಂ ಶರಣಾಗತಮ್ ।।2।।
ಮಾಂಸಾಹಾರಾತ್ಸಮುನ್ನಾಜ್ಜಗತ್ ಸಂಹಾರಕಾರಕತ್।
ಕರುಣಾಖ್ಯಾದ್ವಿಷಾಣೋರ್ಮಾಂ ರಕ್ಷ ರಕ್ಷ ಮಹೇಶ್ವರ।।3।।
ಚಿನಾದೇಶೇ ಜನಿಂಲಬ್ದ್ವಾ
ಭೂಮೌವಿಷ್ವಕ್ ಪ್ರಸರ್ಪತಃ|
ಜನಾತಂಕಾದ್ವಿಷಾಣೋರ್ಮಾಂ ಸರ್ವತಃ ಪಾಹಿ ಶಂಕರ।।4।।
ಸಮುದ್ರಮಥನೋದ್ಬತಾತ್ ಕಾಲಾಕೂಟಾಚ್ಚ ಬಿಭ್ಯತಃ।
ತ್ವಯೈವ ರಕ್ಷಿತಾ ದೇವಾ ದೇವ ಜಗತ್ಪತೇ ॥ 6॥

ಇದರ ಸಾರಾಂಶ:

“ಮೃತ್ಯುವಿಗೂ ಮಹಾಮೃತ್ಯು ವೆನಿಸಿದ ಮೃತ್ಯುಂಜಯನಾದ ಮಹಾದೇವನೇ! ಕೊರೊನಾ ಎಂಬ ವಿಷಾಣುವಿನಿಂದ ಶರಣಾಗತನಾದ ನನ್ನನ್ನು ಪಾರುಮಾಡು. ಈ ಭೂಮಿಯ ಮೇಲೆ ಎಲ್ಲೆಡೆ ಆವರಿಸಿ ಇಡೀ ಜಗತ್ತಿನ ಸಂಹಾರ ಮಾಡುತ್ತಿರುವ ಈ ವಿಷಾಣು ಚೀನಾ ದೇಶದಲ್ಲಿ ಮಾಂಸಾಹಾರ ಸೇವನೆಯಿಂದ ಹುಟ್ಟಿದ್ದು. ಸಮುದ್ರಮಥನದ ಸಂದರ್ಭದಲ್ಲಿ ಹುಟ್ಟಿಬಂದ ಭಯಾನಕವಾದ ಕಾಲಕೂಟ ವಿಷದಿಂದ ದೇವಾನುದೇವತೆಗಳನ್ನು ರಕ್ಷಿಸಿದವನು ಜಗದೊಡೆಯನಾದ ನೀನೇ ಅಲ್ಲವೇ ! ಹೇ ಶಿವನೇ ಈ ವಿಷಾಣುವಿನಿಂದ ನನ್ನನ್ನು ರಕ್ಷಿಸು, ರಕ್ಷಿಸು!”

ಕೊರೊನಾ ವೈರಾಣು ದಾಳಿಗೆ ತುತ್ತಾಗಿರುವ ವಿಶ್ವದ ಪ್ರಸ್ತುತ ಸಂದರ್ಭಕ್ಕೆ ಈ ಶ್ಲೋಕಗಳು ಕನ್ನಡಿ ಹಿಡಿದಂತಿವೆ. ಹಾಗಾದರೆ ಕೊರೊನಾ ವೈರಾಣು ಶಿವಮಹಾಪುರಾಣದಷ್ಟು ಹಳೆಯದೇ? ಆಗಿನ ಕಾಲದ ಜನರು ಇದನ್ನು ತಡೆಗಟ್ಟಲು ಮಾಡಿದ್ದೇನು? ಇಂದಿನಂತೆ ಅಂದು ಜನರನ್ನು 21ದಿನ ಕ್ವಾರಂಟೈನ್ ಮಾಡಲಾಗಿತ್ತೇ ? ಏ.14ಕ್ಕೆ ಈ ಕ್ವಾರಂಟೈನ್ ಮುಗಿಯುತ್ತದೆಯೇ ಅಥವಾ ಮುಂದುವರಿಯುತ್ತದೆಯೇ ಎಂಬ ಕಾತುರದಿಂದ ಕಾಯುತ್ತಿರುವ ಜನರಿಗೆ ಶಿವಪುರಾಣದ ಪುಟಗಳನ್ನು ತಿರುವಿ ಹಾಕಿದರೆ ಏನಾದರೂ ಉತ್ತರ ಸಿಕ್ಕೀತೆ? ವಾಸ್ತವವಾಗಿ ಶಿವಪುರಾಣದಲ್ಲಿ ಆಗಲಿ ಇನ್ನಾವುದೇ ಪುರಾಣದಲ್ಲಾಗಲಿ ಈ ಶ್ಲೋಕಗಳು ಇಲ್ಲವೇ ಇಲ್ಲ. ಇಂದಿನ ಕಾಲಕ್ಕೆ ಅರ್ಥಪೂರ್ಣವಾದ ಈ ಶ್ಲೋಕಗಳನ್ನು ಆಧುನಿಕ ಸಂಸ್ಕೃತ ಪಂಡಿತರು ಯಾರೋ ಶಿವಪುರಾಣದ ಹೆಸರಿನಲ್ಲಿ ಬರೆದು ಸೇರಿಸಿ ಸೇರಿಸಿದ್ದಾರೆ. ಕವಿಗೋಷ್ಠಿಯೊಂದರಲ್ಲಿ ‘ನಾನೇ ಬರೆದ ಒಂದು ಕವಿತೆ’ ಎಂದು ಹೇಳಿ ಬೇಂದ್ರೆಯವರ ಕವಿತೆಯನ್ನು ನಕಲು ಮಾಡಿಕೊಂಡು ಬೇಂದ್ರೆಯವರ ಎದುರಿಗೇ ಓದಿ ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿದ ‘ಕವಿ ಪುಂಗವ’ ನಂತೆ ಈ ಪಂಡಿತರು ನಾನೇ ಬರೆದದ್ದು ಎಂದು ಜಂಭ ಕೊಚ್ಚಿಕೊಳ್ಳಲು ಸದ್ಯ ಹೋಗಿಲ್ಲ! ಅಷ್ಟರ ಮಟ್ಟಿಗೆ ಅವರು ಅಭಿನಂದನಾರ್ಹರು. ‘ಪುರಾಣವೆಂಬುದು ಪುಂಡರ ಗೋಷ್ಠಿ’ ಎಂದು ಅಲ್ಲಮಪ್ರಭುಗಳು ಕಟುಟೀಕೆ ಮಾಡಿದ್ದು ಇದೇ ಕಾರಣಕ್ಕೆ ಇರಬಹುದೆ?

– ಶ್ರೀ ತರಳಬಾಳು ಜಗದ್ಗುರು  1108
ಡಾ।। ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,ಸಿರಿಗೆರೆ

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *