ಬೆಂಗಳೂರು: ಮುಂದಿನ (2026-27) ಶೈಕ್ಷಣಿಕ ವರ್ಷದಿಂದಲ್ಲೇ ರಾಜ್ಯದ (Karnataka) 8 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ (MD/ MS) ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission) ಪ್ರಕಟಿಸಿರುವ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ನಿಯಮಾವಳಿ ಹಾಗೂ ಸ್ನಾತಕೋತ್ತರ ಪಠ್ಯಕ್ರಮಗಳ ಕನಿಷ್ಠ ಮಾನದಂಡದ ಅವಶ್ಯಕತೆಗಳು ಅನ್ವಯ ಕನಿಷ್ಠ 220 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು ನಿಗಧಿಪಡಿಸಲಾದ ನಿಯಮಗಳನ್ನು ಪೂರೈಸಿದಲ್ಲಿ ಪದವಿ ಪೂರ್ವ (Under Graduate) ವೈದ್ಯಕೀಯ ಕಾಲೇಜು ಜೋಡಣೆ ಇಲ್ಲದಿದ್ದರೂ ಸಹ MD/MS ಕೋರ್ಸ್‌ಗಳನ್ನು ಪ್ರಾರಂಭಿಸಲು ಅರ್ಹವಾಗಿರುತ್ತವೆ ಎಂದು ತಿಳಿಸಲಾಗಿದೆ.
ಎಲ್ಲೆಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ..?
ಈ ಕೆಳಕಂಡ ಎಂಟು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು 2026-27ನೇ ಶೈಕ್ಷಣಿಕ ವರ್ಷದಿಂದ ಎಂಡಿ/ಎಂಎಸ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅರ್ಹವಾಗಿರವೆ.
- ಜಿಲ್ಲಾ ಆಸ್ಪತ್ರೆ, ವಿಜಯಪುರ
- ಜಿಲ್ಲಾ ಆಸ್ಪತ್ರೆ, ಬಾಗಲಕೋಟೆ
- ಜಿಲ್ಲಾ ಆಸ್ಪತ್ರೆ, ತುಮಕೂರು
- ಜಿಲ್ಲಾ ಆಸ್ಪತ್ರೆ, ಕೋಲಾರ
- ಸರ್ಕಾರಿ ಆಸ್ಪತ್ರೆ, ಜಯನಗರ, ಬೆಂಗಳೂರು
- ಕೆ.ಸಿ. ಜನರಲ್ ಆಸ್ಪತ್ರೆ, ಬೆಂಗಳೂರು
- ಜಿಲ್ಲಾ ಆಸ್ಪತ್ರೆ, ರಾಮನಗರ
- ಜಿಲ್ಲಾ ಆಸ್ಪತ್ರೆ, ಮೈಸೂರು
ಈ ಜಿಲ್ಲಾ ಆಸ್ಪತ್ರೆಗಳಲ್ಲಿ ಹೊಸದಾಗಿ MD/MS ಪಠ್ಯಕ್ರಮಗಳನ್ನು ಪ್ರಾರಂಭಿಸುವುದರಿಂದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ತೃತೀಯ ಹಂತದ ಕೇಂದ್ರಗಳಿಂದ ವಿಕೇಂದ್ರೀಕರಣಗೊಳಿಸುವುದು ಸಾಧ್ಯವಾಗುತ್ತದೆ. ಇದರಿಂದ ಸರ್ಕಾರಿ ಸೇವೆಯಲ್ಲಿ ತಜ್ಞ ವೈದ್ಯರ ಸಂಖ್ಯೆ ಹೆಚ್ಚಿಸಲು, ಜಿಲ್ಲಾ ಮಟ್ಟದ ದ್ವಿತೀಯ ಹಂತದ ಆರೈಕೆ ಹಾಗೂ ಶೈಕ್ಷಣಿಕ ಸಾಮರ್ಥ್ಯ ಬಲಪಡಿಸಿಕೊಳ್ಳಲು, ರಾಷ್ಟ್ರೀಯ ವೈದ್ಯಕೀಯ ಆಯೋಗದ District Residency Programme (DRP) ನ ಉದ್ದೇಶವನ್ನು ಈಡೇರಿಸಲು ಹಾಗೂ ಹೊರವಲಯದ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ, ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವುದರ ಜೊತೆಗೆ ರಾಷ್ಟ್ರ ಮಟ್ಟದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಯ ಸರ್ಕಾರದ ನೀತಿಗೆ ಹೊಂದಾಣಿಕೆ ಗೊಳಿಸಲು ಸಾದ್ಯವಾಗುತ್ತದೆ. ಈ ಯೋಜನೆ ಸಂಯೋಜನೆ ಮತ್ತು ಅನುಷ್ಠಾನದ ಜವಬ್ದಾರಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ವಹಿಸಿಕೊಂಡಿದೆ.



