ದಾವಣಗೆರೆ: ತರಕಾರಿ ಬೆಳೆಗಳ ಉತ್ಪಾದನೆಯಲ್ಲಿ ಉತ್ತಮ ಗುಣಮಟ್ಟದ ಬೀಜಗಳ ಆಯ್ಕೆ ಪ್ರಮುಖವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಕೇಂದ್ರದ ವತಿಯಿಂದ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಮ್ಮಿಕೊಂಡ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈರುಳ್ಳಿ ತಾಲ್ಲೂಕಿನ ಪ್ರಮುಖ ಬೆಳೆಯಾಗಿದ್ದು, ರೈತರು ಈ ವರ್ಷ ಹೆಚ್ಚಿನ ಮಳೆಯಿಂದಾಗಿ ಅರ್ಥಿಕ ನಷ್ಟವನ್ನು
ಅನುಭವಿಸಿದ್ದಾರೆ. ಹಾಗಾಗಿ ಹಿಂಗಾರಿನಲ್ಲಿ ಉತ್ತಮ ಇಳುವರಿ ಕೊಡುವ ತಳಿ ಎನ್‌ಹೆಚ್ ಆರ್‌ಡಿಎಫ್ ರೆಡ್ ತಳಿಯನ್ನು
ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು.
ಬಿತ್ತನೆಗೂ ಮುನ್ನ ಬೀಜವನ್ನು ಟ್ರೈಕೋಡರ್ಮಾದಿಂದ ಉಪಚಾರ ಮಾಡುವುದರಿಂದ ಶಿಲೀಂದ್ರ ರೋಗಗಳನ್ನು ನಿಯಂತ್ರಿಸಬಹುದೆಂದರು. ಕೇಂದ್ರದ ಬೇಸಾಯ ತಜ್ಞರಾದ ಶ್ರೀ ಮಲ್ಲಿಕಾರ್ಜುನ ಬಿ.ಓ. ಹಿಂಗಾರಿನಲ್ಲಿ ಕಡಲೆ ಬೆಳೆಯ ಆಧುನಿಕ ತಂತ್ರಜ್ಞಾನಗಳು, ತೊಗರಿಯಲ್ಲಿ ಲಘು ಪೋಷಕಾಂಶದ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಾಹಿತಿ
ನೀಡಿದರು.
ಕಾರ್ಯಕ್ರಮದಲ್ಲಿ ರೈತರಾದ ಶಶಿಧರ, ಗುರುಲಿಂಗಪ್ಪ, ಚಂದ್ರಣ್ಣ, ಮೇಘನಾಥ್ , ಓಬಣ್ಣ ಹಾಗೂ ಇತರರು ಹಾಜರಿದ್ದರು.



