ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಅರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಂಡಿದ್ದು, ಇನ್ನೂ ಪೂರ್ಣಗೊಳ್ಳದ ಕಾರಣ ದಸರಾ ರಜೆ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ
– ಸಿ.ಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘದಿಂದ ಸಿಎಂ ಭೇಟಿ ಮಾಡಿ ಸರ್ಕಾರದ ಜಾತಿ ಸಮೀಕ್ಷೆ ಮತ್ತು ಶಾಲೆಗೆ ಹಾಜರಾಗಿ ಪಾಠ ಬೋಧನೆ ಮಾಡುವುದು ಹೊರೆ ಆಗಲಿದೆ ಎಂದು ಮನವಿ ಸಲ್ಲಿಕೆ ಮಾಡಿದ್ದರು. ಶಿಕ್ಷಕರ ಸಂಘದ ಮನವಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ದಸರಾ ರಜೆಯ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ತಿಳಿಸಿದ್ದಾರೆ.
ಪೂರ್ಣಗೊಳ್ಳದ ಸಮೀಕ್ಷೆ; ಹೆಚ್ಚುವರಿ 10 ದಿನಕ್ಕೆ ಮನವಿ
ಸಮೀಕ್ಷೆ ಕಾರ್ಯ ಸೆಪ್ಟೆಂಬರ್ 22 ರಿಂದ ಆರಂಭಗೊಂಡಿತ್ತು. ಇದನ್ನು ಅಕ್ಟೋಬರ್ 7ರೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿರೀಕ್ಷಿಸಿದಷ್ಟು ಆಗಿಲ್ಲ. ಸಮೀಕ್ಷಾ ಕಾರ್ಯದಲ್ಲಿ ರಾಜ್ಯದಾದ್ಯಂತ ಸುಮಾರು 1.20 ಲಕ್ಷ ಶಿಕ್ಷಕರು ಹಾಗೂ 40 ಸಾವಿರ ಇತರ ಸಿಬ್ಬಂದಿ ಸೇರಿ ಒಟ್ಟು 1.60 ಲಕ್ಷ ಜನರು ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರ ಸಂಘಟನೆಗಳು ಸಮೀಕ್ಷೆ ಪೂರ್ಣಗೊಳಿಸಲು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು, ಶಾಶ್ವತ ಹಿಂದುಳಿದ ಆಯೋಗದ ಜೊತೆ ಚರ್ಚಿಸಿ ಶಿಕ್ಷಣ ಇಲಾಖೆಯ ಮೂಲಕ ರಜೆ ವಿಸ್ತರಿಸಿ ಆದೇಶ ನೀಡಿದೆ. ನಾಳೆಯಿಂದ (ಅ.08) ಆರಂಭಗೊಂಡು ಅಕ್ಟೋಬರ್ 18 ರವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಮುಂದುವರೆಯಲಿದೆ.
ಪಿಯುಸಿ ಶಿಕ್ಷಕರಿಗೆ ವಿನಾಯಿತಿ
ದ್ವಿತೀಯ ಪಿಯುಸಿ ಮದ್ಯಂತರ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಈ ಶಿಕ್ಷಕರು ಪರೀಕ್ಷಾ ಕರ್ತವ್ಯಗಳನ್ನು ಮುಂದುವರೆಸಲಿದ್ದಾರೆ.