ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲಿರುವ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಯಬೇಕು ಮತ್ತು ಜುಲೈ ನಿಂದ ಶಾಲಾ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು ಎಂದುದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿ ಡಾ.ಸುರೇಶ್.ಬಿ.ಇಟ್ನಾಳ್ ತಿಳಿಸಿದರು.
ಮಕ್ಕಳ ಆರೋಗ್ಯ ಇಲಾಖೆಯ ಜವಾಬ್ದಾರಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕಾರ್ಯಕಾರಿ ಸಮಿತಿ ಸಭೆ ಮತ್ತು ಆರ್.ಬಿ.ಎಸ್.ಕೆ. ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಶು ಅಭಿವೃದ್ದಿ ಯೊಜನಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಿಂದ ಸರಿಯಾಗಿ ಕೆಲಸ ತೆಗೆಯಬೇಕು. ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಜವಾಬ್ದಾರಿ ಹೆಚ್ಚು ಇದೆ. ಮಕ್ಕಳಿಗೆ ನೀಡುವ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ, ಆತ್ಮಸಾಕ್ಷಿಯಾಗಿ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ವಿಕಲಚೇತನರಿಗೆ ಪುನರ್ವಸತಿ ಕಲ್ಪಿಸಿ ಜಿಲ್ಲೆಯಲ್ಲಿ ಮಹತ್ವದ ಬದಲಾವಣೆ ಕಾಣಬಹುದು. ಈ ನಿಟ್ಟಿನಲ್ಲಿ ವೈದ್ಯರು, ಶಿಕ್ಷಕರು ಸೇರಿದಂತೆ ವಿಕಲಚೇತನರ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಅವರಿಗೆ ಒದಗಿಸಬೇಕಾದ ಸೌಲಭ್ಯಗಳು ಮತ್ತು ಪುನರ್ವಸತಿ ಬಗ್ಗೆ ಹೆಚ್ಚಿನ ಗಮನಹರಿಸಿ ಅವರ ಬಾಳಿನಲ್ಲಿ ಆಶಾಕಿರಣವಾಗಬೇಕೆಂದರು.
ಸಮಸ್ಯೆಗಳಿಗೆ ಸಮರ್ಪಕ ಶಸ್ತ್ರ ಚಿಕಿತ್ಸೆ ಒದಗಿಸಿ
ಆಸ್ಪತ್ರೆಗಳಲ್ಲಿ ಕಿವಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯಲ್ಲಿ ಹೆಚ್ಚು ಯಶಸ್ವಿಯಾಗುತ್ತಿವೆ. ಇವರಿಗೆ ದೊರಕಬೇಕಾದ ಪರಿಕರಗಳ ಸೌಲಭ್ಯಗಳನ್ನು ತಲುಪಿಸಬೇಕು. ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಅಧಿಕಾರಿಗಳು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಾಗ ಕಂಡುಬರುವ ಕಿವಿ, ಕಣ್ಣು, ಬುದ್ದಿಮಾಂದ್ಯತೆ, ಇತರೆ ನ್ಯೂನತೆಗಳಿಗೆ ಸಂಬಧಿಸಿದ ಸಮಸ್ಯೆಗಳಿಗೆ ಸಮರ್ಪಕವಾದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಎಂದರು.
ಹಾಗೆಯೇ ವೈದ್ಯರು ಕೂಡ ಆಪ್ತಸಮಾಲೋಚನೆ, ಚಿಕಿತ್ಸೆ ಸೇರಿದಂತೆ ಅವರಿಗೆ ಅಗತ್ಯವಾದ ಸೂಕ್ತ ಸೌಲಭ್ಯ ನೀಡಿದಲ್ಲಿ ಪ್ರತಿ ವರ್ಷ ಸಾಕಷ್ಟು ಜನರು ಇದರ ಪ್ರಯೋಜನ ಪಡೆದು ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆ ಕಾಣಬಹುದೆಂದರು.1 ವರ್ಷದವರೆಗೆ ಲಸಿಕೆ ಪಡೆದ ಮಕ್ಕಳ ಸಂಖ್ಯೆ-1759, 9 ರಿಂದ 11 ತಿಂಗಳೊಳಗೆ ಸಂಪೂರ್ಣ ಲಸಿಕೆ ಪಡೆದ ಮಕ್ಕಳು-1722, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೆರೀಯನ್ ಶೇ.40 ಆಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.73 ರಷ್ಟು ಆಗಿರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ;ಷಣ್ಮುಖಪ್ಪ, ಆರ್‌ಸಿಹೆಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



