ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ‘ಕೈ’ ಕೊಟ್ಟಿದ್ದ ಪಾಲಿಕೆ ಸದಸ್ಯ ಜೆ.ಎನ್, ಶ್ರೀನಿವಾಸ್ ಇಂದು ಹಾಜರಾಗಿದ್ದಾರೆ. ನನಗೆ ಮೇಯರ್ ಸ್ಥಾನ ಕೊಟ್ಟಿಲ್ಲ ಅನ್ನೋ ನೋವು ಇತ್ತು. ಈ ಹಿನ್ನೆಲೆಯಲ್ಲಿ ಮತದಾನದಲ್ಲಿ ಭಾಗಿಯಾಗಿಲ್ಲ. ನಾನು ಎರಡು ಸಲ ಗೆದ್ದರೂ, ಮೇಯರ್ ಸ್ಥಾನಕ್ಕೆ ನನ್ನನ್ನು ಸೂಚಿಸಲಿಲ್ಲ. ಮೊದಲ ಸಲ ಗೆದ್ದವರನ್ನು ಮೇಯರ್ ಆಗಿ ಸೂಚಿಸಿದ್ದರಿಂದ ಮನಸ್ಸಿಗೆ ನೋವಾಗಿತ್ತು. ಹೀಗಾಗಿ ಚುನಾವಣೆಯಿಂದ ದೂರು ಉಳಿದ್ದೇನೆ ಎಂದು ಹೇಳಿದ್ದಾರೆ.
ಈ ಬಾರಿ ಸಾಮಾನ್ಯ ಕ್ಷೇತ್ರಕ್ಕೆ ಮೇಯರ್ ಸ್ಥಾನ ನಿಗದಿಯಾಗಿದ್ದರಿಂದ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ, ಆದರೆ, ನನ್ನನ್ನು ಮೇಯರ್ ಸ್ಥಾನಕ್ಕೆ ಸೂಚಿಸಲೇ ಇಲ್ಲ. ಮೊದಲ ಸಲ ಗೆದ್ದವರನ್ನು ಮೇಯರ್ ಮಾಡಿದ್ರೆ, ನಾವು ನೋಡಿಕೊಂಡು ಸುಮ್ಮನಿರಬೇಕಾ..? ಸುಮ್ಮನಿರುವುದಕ್ಕೆ ನಾನೇನು ಸನ್ಯಾಸಿಯಲ್ಲ. ನಾವೇನು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಅನ್ನೋ ರೀತಿನಾ..? ಎಂದು ತಮ್ಮ ನೋವು ಹೊರ ಹಾಕಿದರು. ಕನಿಷ್ಠ ಪಕ್ಷ ನನಗೆ ಕೊಡುವುದು ಕಷ್ಟ ಆಗುತ್ತದೆ ಎಂದರೆ, ನನ್ನ ಪತ್ನಿಯನ್ನಾದರೂ ಮೇಯರ್ ಮಾಡಬಹುದಿತ್ತು ಎಂದರು.

ನನಗೆ ಜನ ಗೆಲ್ಲಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕನಾಗಿ ಕೆಲಸ ಮಾಡುವುದು ನನ್ನ ಉದ್ದೇಶ. ನಾನು ಈ ಬಾರಿ ಮೇಯರ್ ಆಗ್ತೀನಿ ಅಂತಾ ತುಂಬಾ ಆಸೆ ಇತ್ತು. ನನ್ನ ವಾರ್ಡ್ ನಲ್ಲಿ ನಾಲ್ಕು ಎಕೆರೆ ಪಾರ್ಕ್ ಜಾಗ ಖಾಲಿ ಇದೆ. ಇದನ್ನು ಹೈಟೆಕ್ ಪಾರ್ಕ್ ಮಾಡುವ ಗುರಿ ಹೊಂದಿದ್ದೆ. ಆದರೆ, ಅದಕ್ಕೆ ಅವಕಾಶ ಕೊಡಲಿಲ್ಲ. ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಈಗಲೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಬರಲ್ಲ. ಈ ಬಾರಿ ಮಲ್ಲಣ್ಣ ನನಗೆ ಮೇಯರ್ ಸ್ಥಾನ ಕೊಟ್ಟಿದ್ದರೆ, ಮಲ್ಲಣ್ಣನನ್ನು ಆಕಾಶದಲ್ಲಿ ಕುರಿಸುತ್ತಿದ್ದೆ. ಶಾಮನೂರು ಶಿವಶಂಕರಪ್ಪ ಅವರಿಗೆ ನನ್ನ ಮೇಲೆ ಸಿಟ್ಟಿರಬಹುದು. ಅವರು ನನ್ನ ತಂದೆ ಸಮಾನರು, ಅವರು ಬೈದರೆ ಮಕ್ಕಳಿಗೆ ಬೈದಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದರು.
ನಿನ್ನೆ (ಫೆ. 19) ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿಯ ಅಜಯ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದರು. ಪಾಲಿಕೆ ಕಾಂಗ್ರೆಸ್ ಸದಸ್ಯರಾದ ಯಶೋದಾ ಉಮೇಶ್, ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ ಎಸ್ ಗೈರು ಹಾಜರಾಗಿದ್ದಾರೆ.



