ದಾವಣಗೆರೆ: ನಿವೇಶನ ಕಂದಾಯ ಕಡಿಮೆ ಮಾಡಲು 20 ಸಾವಿರ ರೂಪಾಯಿಗೆ ಲಂಚ ಪಡೆಯುವಾಗ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬುದ್ದಿದ್ದಾರೆ.
ಜಿಲ್ಲೆಯ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಮತ್ತು ಕಂದಾಯ ಅಧಿಕಾರಿ ಯು. ರಮೇಶ್ ಲೋಕಯುಕ್ಕೆ ಬಲೆಗೆ ಬಿದ್ದ ಅಧಿಕಾರಿಗಳು. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ರಾಜು ಲಕ್ಷ್ಮಣ್ ಕಾಂಬ್ಳೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಸಹೋದರ ಬಾಬು ಹರಿಹರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀದೇವಿ ಪೆಟ್ರೋಲ್ ಬಂಕ್‌ನ ನಿವೇಶನದ ಸುಮಾರು 3 ರಿಂದ 4 ವರ್ಷಗಳ ಕಂದಾಯವನ್ನು ಪಾವತಿಸಬೇಕಿತ್ತು. ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ್ ಅವರು ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂಗಳನ್ನು ಪಾವತಿಸಬೇಕಾಗುತ್ತೆ ಎಂದು ತಿಳಿಸಿದ್ದರು.
ಕಂದಾಯ ಮೊತ್ತ 1,39,400 ರೂಪಾಯಿಯಲ್ಲಿ ಕಡಿಮೆ ಮಾಡಿ, ಸುಮಾರು 50-60 ಸಾವಿರ ರೂಗಳ ಮೊತ್ತವನ್ನು ನೀಡಿ. ಇದಕ್ಕೆ 20 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಡಲು ಇಷ್ಟವಿಲ್ಲದ ಲಕ್ಷ್ಮಣ್ ಕಾಂಬ್ಳೆ, ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಂದು 20,000 ರೂಪಾಯಿ ಲಂಚದ ಹಣ ಸ್ವೀಕರಿಸುವ ವೇಳೆ ಕಾರ್ಯಾಚರಣೆ ನಡೆಸಿ ಕಂದಾಯ ಅಧಿಕಾರಿ ರಮೇಶ್ ,ಕಂದಾಯ ನಿರೀಕ್ಷಕ ನಾಗೇಶ್ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಮಧುಸೂದನ್ ಸಿ., ಪ್ರಭು ಬಸೂರಿನ, ಪಿ. ಸರಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



