ದಾವಣಗೆರೆ: ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹಾಗೂ ಬೃಹತ್ ಶೋಭಾಯಾತ್ರೆ ನಗರದಲ್ಲಿಂದು ಅದ್ಧೂರಿಯಾಗಿ ನಡೆಯುತ್ತಿದೆ. ಈ ಅದ್ಧೂರಿ ಮರೆವಣಿಗೆಗೆ ದಾವಣಗೆರೆ, ಹರಿಹರ ಸೇರಿ ಸುತ್ತಮುತ್ತಲಿನ ನಗರ, ಪಟ್ಟಣ, ಗ್ರಾಮಗಳಿಂದ ಲಕ್ಷಾಂತರ ಜನ ಹರಿದು ಬಂದಿತ್ತು. ಯುವ ಸಮೂಹ ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರದ ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎವಿಕೆ ರಸ್ತೆ ಮೂಲಕ ವಿದ್ಯಾರ್ಥಿ ಭವನ, ಕೆಇಬಿ ವೃತ್ತ, ಜಯದೇವ ಸರ್ಕಲ್ , ಲಾಯರ್ ರಸ್ತೆ ಮೂಲಕ ಪಿ.ಬಿ ರಸ್ತೆಗೆ ಸೇರಿತು. ಮಹಾನಗರ ಪಾಲಿಕೆ ಮುಂದೆ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕ, ಯುವತಿಯರಿಗೆ ಪ್ರತ್ಯೇಕ ಡಿಜೆ ಹಾಕಲಾಗಿತ್ತು. ಯುವಕ ಯುವತಿಯರು ಸಾಂಗ್ ಗೆ ತಕ್ಕಂತೆ ನೃತ್ಯ ಮಾಡಿ ಸಂಭ್ರಮಿಸಿದರು.
ಬೃಹತ್ ಮೆರವಣಿಗೆ ಹಿನ್ನೆಲೆ ನಗರದ ಎಲ್ಲ ರಸ್ತೆಗಳು ಕೇಸರಿಮಯವಾಗಿದ್ದವು. ಈ ಬಾರಿಯ ಮೆರವಣಿಗೆಯಲ್ಲಿ ಯಾವ ನಟ ಫೋಟೋಗೆ ಅವಕಾಶ ನೀಡದಿದ್ದರಿಂದ ಎಲ್ಲಡೆ ಕೇಸರಿ ಶಾಲು, ಬಾವುಟಗಳು ರಾರಾಜಿಸುತ್ತಿದ್ದವು. ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏಪರ್ಡಿಸಿತ್ತು. ಇದಲ್ಲದೆ, ಮೆರವಣಿಗೆ ಡ್ರೋನ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು.
ಮರೆವಣಿಗೆ ವೇಳೆ ಮಾರ್ಗ ಮಧ್ಯೆ ವಿವಿಧ ಸಂಘಟನೆಗಳು ಆಹಾರ ಪೊಟ್ಟಣಗಳು, ನೀರು, ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಿಸುವ ಮೂಲಕ ಭಕ್ತರ ಹಸಿವು, ಬಾಯಾರಿಕೆ ನೀಗಿಸಿದರು. ಮೆರವಣಿಗೆಯಲ್ಲಿ ಗಾಯತ್ರಿ ಸಿದ್ದೇಶ್ವರಪಾಲ್ಗೊಂಡು ಗಣೇಶನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂಧರ್ಭದಲ್ಲಿ ಮಾಜಿ ದೂಡಾ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದೂ ಮಹಾ ಗಣಪತಿಯ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ರಾಜ್ಯ ಮಹಿಳಾ ಬಿಜೆಪಿ ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಮಹಿಳಾ ಘಟಕದ ಮುಖಂಡರಾದ ಭಾಗ್ಯ ಪಿಸಾಳೆ, ಚೇತನ ಬಾಯಿ, ಲೀಲಮ್ಮ, ಪ್ರೇಮ ನಟರಾಜ್, ರೂಪಾ ವೀರೇಶ್ ಹನಗವಾಡಿ, ಮುಖಂಡರಾದ ಶಿವನಗೌಡ ಪಾಟೀಲ್, ಸುರೇಶ್ರಾವ್ ಶಿಂಧೆ, ಬಿ.ಜಿ. ರೇವಣಸಿದ್ದಪ್ಪ ಹಾಗೂ ಹಿಂದೂ ಮಹಾ ಗಣಪತಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿಗುರು, ಮಾಜಿ ಮೇಯರ್ ಎಸ್. ಟಿ. ವಿರೇಶ್, ಮಾಜಿ ಎಂಎಲ್ ಸಿ ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.



