ದಾವಣಗೆರೆ: ಹೊನ್ನಾಳಿ ತಾಲೂಕಿನ ಮಾಸಡಿ, ಅರಕರೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಭಯಭೀತರಾಗಿದ್ದ ಗ್ರಾಮಸ್ಥರಲ್ಲಿ ಆತಂಕ ದೂರವಾಗಿದ್ದು, ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
3 ದಿನಗಳ ಹಿಂದೆ ಕರುವನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಭಾಗಗಳಲ್ಲಿ ಚಿರತೆ ನಡೆದಾಡಿದ ಹೆಜ್ಜೆ ಗುರುತಿನ ಆಧಾರದ ಮೇಲೆ ಬೋನು ಅಳವಡಿಸಿ, ಸೆರೆಹಿಡಿಯಲು ವ್ಯವಸ್ಥೆ ಮಾಡಿದ್ದರು. ಚಿರತೆ ಪತ್ತೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಸೆರೆಯಾದ ಚಿರತೆಯನ್ನು ಆನಗೋಡು ಪ್ರಾಣಿ ಸಂರಕ್ಷಣಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದಾವಣಗೆರೆ ವಲಯ, ಮಲೇಬೆನ್ನೂರು ವಲಯ, ಅರಕರೆ ಗಸ್ತು ಸಿಬ್ಬಂದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಗೆರೆ ಅರಣ್ಯ ಇಲಾಖೆ ಅಧಿಕಾರಿ ರತ್ನಾಕರ್, ಉಪವಲಯ ಅರಣ್ಯಾಧಿಕಾರಿ ಹಸನ್ ಬಾಷಾ, ಉಪ ಅರಣ್ಯಾಧಿಕಾರಿ ಶಶಿಧರ್, ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಅರಣ್ಯ ಪಾಲಕ ಸದನ್, ಮುಂತಾದವರು ಭಾಗವಹಿಸಿದ್ದರು.