ಡಿವಿಜಿ ಸುದ್ದಿ, ಹರಿಹರ: ತಾಲ್ಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಫೆ. 8, 9 ರಂದು 2ನೇ ವರ್ಷದ ಜಾತ್ರೆ ನಡೆಯಲಿದೆ. ಎರಡು ದಿನ ನಡೆಯುವ ಜಾತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಮಠದ 22ನೇ ವಾರ್ಷಿಕೋತ್ಸವ, ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಅವರ 13 ನೇ ವರ್ಷದ ಪುಣ್ಯಾರಾಧನೆ ಜರುಗಲಿದೆ. ಸಮಾಜ ಸಂಘಟನೆ ಜಾತ್ರೆಯ ಮುಖ್ಯ ಉದ್ದೇಶವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಯಲ್ಲಿರುವ ಎಲ್ಲಾ ಭಕ್ತಾಧಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶ್ವಿಗೊಳಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆದಿ ಕವಿ ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು 1998 ಫೆ. 9 ರಂದು ಶ್ರೀ ಮಠ ಸ್ಥಾಪನೆಯಾಗಿದೆ. ಈ ನೆನಪಿಗಾಗಿ ಪ್ರತಿ ವರ್ಷ ಫೆ. 9 ರಂದು ಸಮಾಜವನ್ನು ಒಟ್ಟುಗೂಡಿಸಬೇಕು ಎನ್ನುವ ದೃಷ್ಠಿಯಿಂದ ಕಳೆದ ವರ್ಷದಿಂದ ಆರಂಭವಾದ ವಾಲ್ಮೀಕಿ ಜಾತ್ರೆ ಆಯೋಜಿಸಲಾಗಿತ್ತು. ಅದೇ ರೀತಿ ಈ ವರ್ಷ ಫೆ. 8, 9 ರಂದು ಎರಡನೇ ವರ್ಷ ಜಾತ್ರೆ ನಡೆಯಲಿದೆ. ಫೆ.9 ಕ್ಕೆ ಶ್ರೀ ಮಠ ಸ್ಥಾಪನೆಯಾಗಿ 22 ವರ್ಷವಾಗಲಿದ್ದು, ಹಿರಿಯ ಶ್ರೀಗಳಾದ ಶ್ರೀ ಪುಣ್ಯಾನಂದಪುರಿ ಪುಣ್ಯಾರಾಧನೆ ನಡೆಸುವುದು ಮತ್ತು ಸಮಾಜ ಬಂಧು-ಬಾಂಧವರನ್ನು ಒಂದೆಡೆ ಸೇರಿಸುವುದು ಜಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಫೆ. 9 ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆ ಮಹೋತ್ಸವದ ಬೃಹತ್ ಜನಜಾಗೃತಿ ಮಹೋತ್ಸವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಈ ಬಾರಿಯ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಂದ ಕೂಡಲೇ ವರದಿ ಆಧಾರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇನ್ನು ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದೇವೆ. ರಮೇಶ್ ಜಾರಕಿಹೊಳಿ, ಶ್ರೀ ರಾಮುಲು ಇಬ್ಬರಲ್ಲಿ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಫೆ . 8 ರಂದು ಜಾತ್ರೆಯ ಮೊದಲ ದಿನದ ಕಾರ್ಯಕ್ರಮವನ್ನು ಬೆಳಗ್ಗೆ 8 ಗಂಟೆಗೆ ಧಾರವಾಡದ ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಅವರು ಮಹರ್ಷಿ ವಾಲ್ಮೀಕಿ ಧ್ವಜರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 9 ಗಂಟೆಯಿಂದ 11.30 ವೆರೆಗೆ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಶಾಸಕ ಎಸ್. ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಬಿ.ಪಿ. ಹರೀಶ್ ಮತ್ತು ಎಸ್.ಎಚ್ .ಶಿವಶಂಕರ್ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋದಮ್ಮ ಮರುಳಸಿದ್ಧಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜೆಡಿಎಸ್ ಮುಖಂಡ ಹೊದಿಗೆರೆ ರಮೇಶ್, ಜಿಲ್ಲಾಧಿಕಾರಿ ಮಹಾಂತೇಸ್ ಬೀಳಗಿ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ. ಇದೇ ವೇಳೆ ಹರಿಹರ ತಾಲ್ಲೂಕಿ ಎಲ್ಲ ಸಮಾಜದ ಅಧ್ಯಕ್ಷರುಗಳಿ ಹಾಗೂ ವಾಲ್ಮೀಕಿ ಗುರು ಪೀಠದ ಧರ್ಮದರ್ಶಿಗಳಿಗೆ ಸನ್ಮಾನ ನಡೆಯಲಿದೆ ಎಂದರು.
ಮಧ್ಯಾಹ್ನ 12 ರಿಂದ 2.30 ವರೆಗೆ ಬುಡಕಟ್ಟು ಮಹಿಳೆಯರ ಸಬಲೀಕರಣ ಕುರಿತು ರಾಜ್ಯ ಮಟ್ಟದ ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶ ನಡೆಯಲಿದೆ. ಕೃಷಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವಾಲ್ಮೀಕಿ ಪೀಠದ ಧರ್ಮದರ್ಶಿ ಶಾಂತರಲ ರಾಜಣ್ಣ ವಹಿಸಲಿದ್ದಾರೆ. ನಾಡೋಜ ಪ್ರೊ. ಕಮಲಾ ಹಂಪನಾ ಅವರು ಮಹರ್ಪಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಪ್ರಸ್ತಾವಿಕ ನುಡಿಯನ್ನು ಸಾಹಿತಿ ಡಾ.ಎಸ್. ಅನುಸೂಯಮ್ಮ ಕೆಂಪನಹಳ್ಳಿ ನೆರವೇರಿಸಲಿದ್ದು, ಹಿರಿಯ ವಕೀಲರಾದ ವಿಜಯಾ ಹಾವನೂರು ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಮಹಿಳಾ ಸಾಧ್ಕರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.
ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸಮಸ್ಯೆ ಕುರಿತು ರಾಜ್ಯ ಮಟ್ಟದ ನೌಕರರ ಸಮ್ಮೇಳನ ನಡೆಯಲಿದೆ. ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶ್ರೀ ಷಡಕ್ಷರಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ .ತಿಪ್ಪೇಸ್ವಾಮಿ ವಹಿಸಿಕೊಳ್ಳಲಿದ್ದಾರೆ.
ಸಂಜೆ 6 ಗಂಟೆಯಿಂದ 8.30 ವರೆಗೆ ರಾಜ್ಯ ಮಟ್ಟದ ಸಂಘಟನೆ ಮತ್ತು ಹೋರಾಟಗಾರರ ಸಮಾವೇಶ ನಡೆಯಲಿದ್ದು, ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಉದ್ಘಾಟಿಸಲಿದ್ದಾರೆ. ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಜಿ.ಟಿ. ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ರಾಷ್ಟ್ರಪದಕ ಪುರಸ್ಕೃತ ಹರ್ತಿಕೋಟೆ ವೀರೇಂದ್ರ ಸಿಂಹ ಪ್ರಸ್ತಾವಿಕ ಮಾತನಾಡಲಿದ್ದಾರೆ. ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಹರ್ಷಿ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ.
ವಾಲ್ಮೀಕಿ ಜಾತ್ರೆಯ ಮುಖ್ಯ ಕಾರ್ಯಕ್ರಮ ಫೆ. 9 ರಂದು ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶಾಲಾ ಮಕ್ಕಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ರಥೋತ್ಸವ ನಡೆಯಲಿದೆ. ಬೆಳಗ್ಗೆ 11.30 ಕ್ಕೆ ಧರ್ಮಸಭೆ ನಡೆಯಲಿದ್ದು, ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದು, ಪಂಚಮಸಾಲಿ ವಚನಾನಂದ ಸ್ವಾಮೀಜಿ, ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಲಿದ್ದಾರೆ.
ಬೆಳಗ್ಗೆ 11.30 ಕ್ಕೆ ವಾಲ್ಮೀಕಿ ಜಾತ್ರೆ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೆಶ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಪ್ರತಿಮೆ ಅನಾವರಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ವಾಲ್ಮೀಕಿ ವಿಜಯ ಸ್ಮರಣ ಸಂಪುಟ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಶ್ರೀ ರಾಮುಲು ವಹಿಸಿಕೊಳ್ಳಲಿದ್ದಾರೆ. ಪ್ರಾಸ್ತವಿಕ ನುಡಿಯನ್ನು ಸತೀಶ್ ಜಾರಕಿಹೊಳಿ ಮಾತನಾಡಲಿದ್ದಾರೆ. ಮಠದ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ರಮೇಶ್ ಜಾರಕಿ ಹೊಳಿ, ಮಾಜಿ ಸಚಿವ ಡಾ. ಜಿ. ಪರಮೇಶ್ವರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಕಿಚ್ಚ ಸುದೀಪ್, ಶಶಿಕುಮಾರ್ ಭಾಗಿಯಾಗಲಿದ್ಧಾರೆ ಎಂದರು.