ನವದೆಹಲಿ: ಸಂಸದ ಅನಂತಕುಮಾರ ಹೆಗಡೆ ಅವರು ಮಹಾತ್ಮ ಗಾಂಧೀಜಿ ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬೇಷರತ್ತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷ ನಾಯಕರು ಲೋಕಸಭೆ ಕಲಾಪದಲ್ಲಿ ಭಾರೀ ಗದ್ದಲ ಉಂಟು ಮಾಡಿದರು.
ಅನಂತ್ ಕುಮಾರ್ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಲೋಕ ಸಭೆಯಲ್ಲಿ ಭಾರೀ ಗದ್ದಲ ಉಂಟು ಮಾಡಿದ ವಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆದರು. ದೇಶದಲ್ಲಿ ಗೋಡ್ಸೆ ರಾಜಕಾರಣ ನಡೆಯುತ್ತಿದೆ ಎಂದು ಘೋಷಣೆ ಕೂಗಿದರು.
ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿ ಕೋಲಾಹಲ ಸೃಷ್ಟಿಸಿದರು. ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿ , ಮತ್ತೆ ಪ್ರಾರಂಭವಾದಗಲೂ ಒದೇ ವಿಚಾರವನ್ನು ಪ್ರಸ್ತಾಪಿಸಿದ ವಿಪಕ್ಷಗಳು, ಇಡೀ ವಿಶ್ವವೇ ಗೌರವಿಸುವ ಗಾಂಧೀಜಿ ಅವರನ್ನು ಬಿಜೆಪಿ ಸಂಸದ ಅಪಮಾನಿಸಿದ್ದಾರೆ. ಬಿಜೆಪಿ ಗೋಡ್ಸೆ ರಾಜಕಾರಣ ಮಾಡುತ್ತಿದೆ ಎಂದು ಗದ್ದಲ ಉಂಟು ಮಾಡಿದರು. ಸ್ಪೀಕರ್ ಎಷ್ಟೇ ಸೂಚಿಸಿದರಾದರೂ, ವಿಪಕ್ಷಗಳು ಪ್ರತಿಭಟನೆ ನಿಲ್ಲಿಸಲಿಲ್ಲ.